ಮಂಗಳೂರು: ಸಮುದ್ರ ವಿಹಾರಕ್ಕೆಂದು ಬಂದಿದ್ದ ವೈದ್ಯರೊಬ್ಬರು ಸಮುದ್ರಪಾಲಾದ ಘಟನೆ ನಿನ್ನೆ ತಡರಾತ್ರಿ ಉಳ್ಳಾಲದಲ್ಲಿ ನಡೆದಿದೆ.
ಡಾ.ಆಶೀಕ್ ಗೌಡ (30) ಸಮುದ್ರ ಪಾಲಾದ ವೈದ್ಯ. ನಗರದಿಂದ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲದ ಡಾ.ಪ್ರದೀಪ್ ಹಾಗೂ ಇಂಟನ್೯ಶಿಪ್ ನಡೆಸುತ್ತಿರುವ ಮೂವರು ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದಾರೆ.
ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಕಲ್ಲಿನ ಮೇಲೆ ನಿಂತ ಡಾ.ಪ್ರದೀಪ್ ಬಂಡೆಯ ಮೇಲಿಂದ ಸಮುದ್ರಕ್ಕೆ ಜಾರಿ ಬಿದ್ದರು. ಕೆಳಗೆ ಬಂಡೆಯನ್ನ ಹಿಡಿದು ಸಹಾಯಕ್ಕೆ ಯಾಚಿಸಿದರು. ಈ ವೇಳೆ ಪ್ರದೀಪ್ ರಕ್ಷಣೆಗೆ ಡಾ.ಆಶೀಕ್ ಗೌಡ ಪ್ರಯತ್ನಿಸಿದ್ದು, ಕಾಲು ಜಾರಿ ಆಶೀಕ್ ಕೂಡ ಸಮುದ್ರಕ್ಕೆ ಬಿದ್ದಿದ್ದಾರೆ.
ಸದ್ಯ ಕಲ್ಲುಗಳ ಆಸರೆ ಪಡೆದು ಡಾ.ಪ್ರದೀಪ್ ಮೇಲೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ ಡಾ.ಆಶೀಕ್ ಗೌಡ ಸ್ನೇಹಿತನ ಉಳಿಸಿಕೊಳ್ಳಲು ಹೋಗಿ ಸಮುದ್ರಪಾಲಾಗಿದ್ದಾರೆ. ಪ್ರದೀಪ್ ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದು, ತಡರಾತ್ರಿವರೆಗೂ ಅಗ್ಮಿಶಾಮಕ ದಳ, ಉಳ್ಳಾಲ ಪೊಲೀಸ್ ಠಾಣೆಯವರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇಂದು ಬೆಳಗ್ಗೆ ರುದ್ರಪಾದೆಯ ಸಮೀಪದಲ್ಲೇ ಆಶೀಕ್ ಮೃತ ದೇಹ ಪತ್ತೆಯಾಗಿದೆ.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










