ವಿಶೇಷ ಭದ್ರತಾ ಪಡೆ ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ನಿಧನ…

63
firstsuddi

ನವದೆಹಲಿ: ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ(61) ಅವರು ನಿಧನರಾಗಿದ್ದಾರೆ.

ಸಿನ್ಹಾ ಅವರು ಕಳೆದ ಕೆಲ ತಿಂಗಳಿನಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಹರಿಯಾಣದ ಗುರುಗ್ರಾಮ್‍ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಸಿನ್ಹಾ ಅವರು 1987ರ ಬ್ಯಾಚ್ ಕೇರಳ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಆ ಬಳಿಕ 2016ರಿಂದ ಎಸ್‍ಪಿಜಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ವಹಿಸಿದ್ದರು. ನಿವೃತ್ತಿಯ ನಂತರ, ಇತ್ತೀಚೆಗೆ ಮೇ 31ರಂದು, ಅವರನ್ನು ಒಂದು ವರ್ಷಕ್ಕೆ ಎಸ್‍ಪಿಜಿ ನಿರ್ದೇಶಕರನ್ನಾಗಿ ಮಾಡಲಾಯಿತು.

ಅರುಣ್ ಕುಮಾರ್ ಸಿನ್ಹಾ ಅವರು ಕೇಂದ್ರಕ್ಕೆ ಡೆಪ್ಯುಟೇಶನ್ ಪಡೆದಾಗ ಕೇರಳದಲ್ಲಿ ಪೊಲೀಸ್ ವಿಶೇಷ ಸೇವೆಗಳು ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದರು. ಅರುಣ್ ಸಿನ್ಹಾ ಅವರು ದೇಶಾದ್ಯಂತ ಪೊಲೀಸ್ ಪಡೆಗಳಿಂದ ಆಯ್ಕೆಯಾದ ಸುಮಾರು 3000 ಕ್ರ್ಯಾಕ್ ಕಮಾಂಡೋಗಳ ತಂಡದ ನಾಯಕರಾಗಿದ್ದರು.

ಸಿನ್ಹಾ ನಿಧನಕ್ಕೆ ಐಪಿಎಸ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.