ಸ್ಮಾರ್ಟ್ ವಾಚ್ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಜಗಳ- ಕೊಲೆಯಲ್ಲಿ ಅಂತ್ಯ…

48
firstsuddi

ಹುಬ್ಬಳ್ಳಿ: ಸ್ಮಾರ್ಟ್ ವಾಚ್ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಗರದ ಬೆಂಗೇರಿಯ ವೆಂಕಟೇಶ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಮನೋಜ್ ಪಾರ್ಕ್ ನಿವಾಸಿ ಅಸ್ಲಂ ಮಕಂದರ್ (30) ಹತ್ಯೆಯಾದ ಯುವಕ. ಮಂಜುನಾಥ್ ನಾಗರಾಜ ಜೀನಹಳ್ಳಿ ಕೊಲೆ ಆರೋಪಿ.

ಮೃತ ಅಸ್ಲಂ ಮಕಂದರ್ ಹಾಗೂ ಆರೋಪಿ ಮಂಜುನಾಥ್ ಇವರಿಬ್ಬರು ಸ್ನೇಹಿತರಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಮಂಜುನಾಥ್ ಅಸ್ಲಂಗೆ ಸ್ಮಾರ್ಟ್ ವಾಚ್ ಕೊಟ್ಟಿದ್ದನಂತೆ. ಆದರೆ ಅಸ್ಲಂ ವಾಚ್ ಕೊಡದೇ ಸತಾಯಿಸುತ್ತಿದ್ದನಂತೆ. ನಿನ್ನೆ ರಾತ್ರಿ ಬೆಂಗೇರಿಯ ವೆಂಕಟೇಶ್ ಕಾಲೋನಿಯಲ್ಲಿ ಎಗ್‍ರೈಸ್ ತಿನ್ನುವ ವೇಳೆ ಇದೇ ವಿಷಯವಾಗಿ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ್ ಅಸ್ಲಂನ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಕೊಲೆಯಾದ ಕೆಲವೇ ಹೊತ್ತಿನಲ್ಲಿ ಆರೋಪಿ ಮಂಜುನಾಥ್‍ನನ್ನು ಬಂಧಿಸಲಾಗಿದ್ದು, ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.