ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಯಶಸ್ಸು ಸರ್ಕಾರಕ್ಕೆ ಅನುಕೂಲವಾದರೆ ಖಾಸಗಿ ವಾಹನಗಳಾದ ಆಟೋ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್‍ಗಳಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಮಹಿಳೆಯರು ಅವುಗಳಲ್ಲಿ ಸಂಚರಿಸುವುದನ್ನೇ ಬಿಟ್ಟಿದ್ದಾರೆ. ಈ ಹಿನ್ನಲೆ ಸೋಮವಾರ(ಸೆ.11) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ವಾಹನಗಳ ಸಂಘದಿಂದ ಬಂದ್‍ಗೆ ಕರೆ ನೀಡಲಾಗಿದೆ. ಇನ್ನು ಈ ಹೋರಾಟಕ್ಕೆ ಓಲಾ, ಉಬರ್ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ಕೂಡ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದಿದ್ದಾರೆ.
ಭಾನುವಾರ ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನ ಸಂಚಾರ ಬಂದ್ ಆಗಲಿದ್ದು, ಸೋಮವಾರ ರಾತ್ರಿ 12 ಗಂಟೆವರೆಗೆ ಬಂದ್ ಮಾಡಲು ಒಕ್ಕೂಟ ನಿರ್ಧಾರ ಮಾಡಿದೆ. ಬಂದ್ ಬಗ್ಗೆ ಜನರಿಗೆ ತಿಳಿಸಲು ಮತ್ತು ಬಂದ್‍ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಕೂಡ ಮಾಡಿದೆ. ಕೆ.ಜಿ ರೋಡ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆ.ಆರ್ ಮಾರ್ಕೆಟ್, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
32 ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರ ನಿಲ್ಲಿಸಲಿವೆ. ಏರ್‌ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಓಲಾ, ಊಬರ್ ಆಟೋ ಟ್ಯಾಕ್ಸಿ ಬಂದ್ ಆಗಲಿದೆ. ಕಾರ್ಪೋರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‍ಗಳು ಕೂಡ ಬಂದ್‍ಗೆ ಬೆಂಬಲ ನೀಡಿದ್ದು ಸಂಚಾರ ಸ್ಥಗಿತಗೊಳಿಸಲಿವೆ.
ಪ್ರತಿಭಟನಾಕಾರರು ನಗರದೊಳಗೆ ಬೃಹತ್ ಮೆರವಣಿಗೆಗೆ ತಯಾರಿ ಮಾಡಿಕೊಂಡಿದ್ದು, ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್‍ನಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಾಗಿದ್ದಾರೆ.










