ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ…

95
firstsuddi

ಮಂಡ್ಯ: ಯುವಕನೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗಾಂಧಿನಗರದಲ್ಲಿ ನಡೆದಿದೆ.

ಗಾಂಧಿನಗರದ ಐದನೇ ಕ್ರಾಸ್​ನ ನಿವಾಸಿ ಅಕ್ಷಯ್ ಅಲಿಯಾಸ್ ಗಂಟ್ಲು(22) ಕೊಲೆಯಾದ ದುರ್ದೈವಿ. ನಿನ್ನೆ ಸಂಜೆ ಅಕ್ಷಯ್, ಮನೆಯ ಸಮೀಪವೇ ಇರುವ ಮಂಡ್ಯದ ಹೊಸಳ್ಳಿ ರಸ್ತೆಯಲ್ಲಿರುವ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ. ಈ ವೇಳೆ ಬೈಕ್​ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಆಟ್ಯಾಕ್ ಮಾಡಿದ್ದರು.

ಇನ್ನು ಅಲ್ಲಿಂದ ತಪ್ಪಿಸಿಕೊಂಡು ನೂರು ಮೀಟರ್ ಓಡಿ ಹೋಗಿ, ಪ್ರದೀಪ್ ಎಂಬುವವರ ಮನೆಯ ಕಾಂಪೌಂಡ್​ನ ಒಳಗೆ ಹೋಗಲು ಯತ್ನಿಸಿದ್ದಾನೆ. ಆದರೆ, ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು, ಮನೆಯ ಕಾಂಪೌಂಡ್ ಒಳಗೆ ಲಾಕ್ ಆದ ಅಕ್ಷಯ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಅಂದಹಾಗೆ ಕೊಲೆಯಾದ ಅಕ್ಷಯ್, ಮೂಲತಃ ಮಂಡ್ಯ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ. ಅಕ್ಷಯ್ ತಾಯಿ ಗ್ರಾಮ ಪಂಚಾಯತ್ ಸದಸ್ಯೆ. ಕೆಲವು ತಿಂಗಳು ಕೆಳಗೆ ಅಲ್ಲಿಂದ ಬಂದು ಮಂಡ್ಯದ ಗಾಂಧಿನಗರದಲ್ಲಿ ವಾಸವಾಗಿದ್ದರು. ಏನೂ ಕೆಲಸ ಮಾಡದ ಅಕ್ಷಯ್, ತಿರುಗಾಡಿಕೊಂಡು ಕಾಲ ಕಳೆಯುತ್ತಿದ್ದ. ಇದೇ ವೇಳೆ ಏರಿಯಾದ ಕೆಲವು ಯುವಕರ ಜೊತೆ ದ್ವೇಷ ಕಟ್ಟಿಕೊಂಡಿದ್ದ. ಇದೇ ವಿಚಾರವಾಗಿ ಕೆಲ ದಿನಗಳ ಕೆಳಗೆ ಗಲಾಟೆ ಕೂಡ ನಡೆದಿತ್ತು. ಅಲ್ಲದೆ ಇದೀಗ ಏರಿಯಾದಲ್ಲಿ ಗಣಪತಿ ಕೂರಿಸುವ ವಿಚಾರವಾಗಿ ಕೂಡ ಕಿರಿಕ್ ಆಗಿತ್ತು. ಇದೇ ವಿಚಾರವನ್ನು ಮುಂದೆ ಇಟ್ಟುಕೊಂಡು, ಸ್ಕೇಚ್ ಹಾಕಿದ ಅದೇ ಏರಿಯಾದ ಯುವಕರ ಗುಂಪು, ನಿನ್ನೆ ಸಂಜೆ ಅಕ್ಷಯ್​ನನ್ನು ಕೊಲೆಗೈದಿದ್ದಾರೆ.

ಈ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.