ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಭಜನಾ ಕಲಾವಿದ ಬಿ.ಪಿ.ಪರಮೇಶ್ವರಪ್ಪ ಆಯ್ಕೆ…

42
firstsuddi

ಚಿಕ್ಕಮಗಳೂರು: ಮುಂದಿನ ತಿಂಗಳು ನಗರದಲ್ಲಿ ನಡೆಯಲಿರುವ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಭಜನಾ ಕಲಾವಿದ ಬಿ.ಪಿ.ಪರಮೇಶ್ವರಪ್ಪ ಅವರಿಗೆ ಕರ್ನಾಟಕ ಜಾನಪದ ಪರಿಷತ್‍ನ ಜಿಲ್ಲಾಘಟಕ ಭಾನುವಾರ ಅಧಿಕೃತ ಆಹ್ವಾನ ನೀಡಿತು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಬೆಳಗ್ಗೆ ಬೆಳವಾಡಿಯ ಪರಮೇಶ್ವರಪ್ಪ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಕಳೆದ 40 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಜನಾ ಸೇವೆ ಸಲ್ಲಿಸುವುದರ ಜೊತೆಗೆ ರಾಜ್ಯಾದ್ಯಂತ ನೂರಾರು ಶಿಷ್ಯರನ್ನು ತಯಾರು ಮಾಡಿರುವ ಪರಮೇಶ್ವರಪ್ಪ ಅವರನ್ನು ಸಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತಮಗೆ ಹೆಮ್ಮೆತಂದಿದೆ ಎಂದರು.

ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಯಶಸ್ಸಿಗೆ ಎಲ್ಲರೂ ತಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಭಜನಾ ಕಲಾವಿದ ಪರಮೇಶ್ವರಪ್ಪ ಅವರ ನಾಲ್ಕು ದಶಕಗಳ ಸಾಧನೆ ಅದ್ಭುತವಾಗಿದ್ದು, ಇಂದಿನ ಪೀಳಿಗೆಯ ಜನರು ಅಂತಹ ಸಾಧನೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಪಿ.ಪರಮೇಶ್ವರಪ್ಪ, ಸಮ್ಮೇಳನ ಅಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ತಮಗೆ ಅತ್ಯಂತ ಸಂತಸ ಮತ್ತು ಹೆಮ್ಮೆತಂದಿದೆ ಎಂದರು.

ಭಜನೆ ಸೇರಿದಂತೆ ಜಾನಪದ ಕಲೆಗಳು ಇಂದು ಪ್ರದರ್ಶನ ಗೊಳ್ಳುತ್ತಿರುವುದು ಕೇವಲ ಹಿರಿಯರಿಂದ ಮಾತ್ರ. ಯುವ ಪೀಳಿಗೆಯ ಜನ ಅದರತ್ತ ಮುಖ ಮಾಡುತ್ತಿಲ್ಲ ಎಂದು ವಿಷಾದಿಸಿದ ಅವರು, ಯುವಜನರು ನಮ್ಮ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಸಮ್ಮೇಳನ ಅಧ್ಯಕ್ಷ ಬಿ.ಪಿ.ಪರಮೇಶ್ವರಪ್ಪ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಗ್ರಾಮದ ಬಸವೇಶ್ವರ ಭಜನಾ ತಂಡದಿಂದ ನಡೆದ ಭಜನಾ ಕಾರ್ಯಕ್ರಮ ಕೇಳುಗರ ಗಮನ ಸೆಳೆಯಿತು.
ಕರ್ನಾಟಕ ಜಾನಪದ ಪರಿಷತ್ತಿನ ತರೀಕೆರೆ ತಾಲೂಕು ಅಧ್ಯಕ್ಷ ನಾಗೇಶ್, ಕಡೂರು ತಾಲ್ಲೂಕು ಅಧ್ಯಕ್ಷ ಜಗದೀಶ್ ಆಚಾರ್, ಅಜ್ಜಂಪುರ ತಾಲೂಕು ಅಧ್ಯಕ್ಷ ಮರುಳಸಿದ್ದಪ್ಪ, ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಜಯಣ್ಣ, ಜಿಲ್ಲಾ ಉಪಾಧ್ಯಕ್ಷ ವಿನೀತ್‍ಕುಮಾರ್, ತರೀಕೆರೆ ಉಪಾಧ್ಯಕ್ಷ ದೇವರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಕಲ್ಪನಾ, ಗ್ರಾಮದ ಮುಖಂಡ ಶಂಕರೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ರಾಜಣ್ಣ, ತ್ಯಾಗದ ಬಗೆಗಿರೀಶ್, ರಘು, ನಾಗೇಂದ್ರಪ್ಪ, ವೀರಗಾಸೆ ಕಲಾವಿದ ಚಂದ್ರಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಶಂಕರ್ ಉಪಸ್ಥಿತರಿದ್ದರು.