ನಮ್ಮ ಮುಂದಿನ ಪೀಳಿಗೆ ಸುಖ, ಸಂತೋಷ, ಸಮೃದ್ಧಿಯಿಂದ ಬದುಕಬೇಕಾದರೆ ರೈತರು ಈಗಿನಿಂದಲೇ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಮುಂದಾಗಬೇಕು: ಬಿ.ಸಿ ಗೀತಾ.

79
firstsuddi

ಚಿಕ್ಕಮಗಳೂರು:- ನಮ್ಮ ಮುಂದಿನ ಪೀಳಿಗೆ ಸುಖ ಸಂತೋಷ ಮತ್ತು ಸಮೃದ್ಧಿಯಿಂದ ಬದುಕಬೇಕಾದರೆ ರೈತರು ಈಗಿನಿಂದಲೇ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಮುಂದಾಗಬೇಕು ಎಂದು ರೋಟರಿ ಜಿಲ್ಲಾ ರಾಜ್ಯಪಾಲೆ ಬಿ.ಸಿ ಗೀತಾ ಸಲಹೆ ಮಾಡಿದರು.

ರೋಟರಿ ಕಾಫಿ ಲ್ಯಾಂಡ್ ತಾಲೂಕಿನ ಮುಗುಳುವಳಿಯಲ್ಲಿ ನಿನ್ನೆ ಏರ್ಪಡಿಸಿದ್ದ ಮಣ್ಣಿನ ಫಲವತ್ತತೆಯ ಸಂರಕ್ಷಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ನಿಧಾನವಾಗಿ ನಾಶವಾಗಿ ಭೂಮಿ ಬರಡಾಗುತ್ತಿದೆ ಎಂದು ವಿಷಾದಿಸಿದರು.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಭೂಮಿಯಲ್ಲಿ ಬೆಳೆ ಬಾರದೆ ಆಹಾರಕ್ಕಾಗಿ ಪರದಾಡಬೇಕಾದ ದುಸ್ತಿತಿ ಎದುರಾಗುತ್ತದೆ ಎಂದು ಎಚ್ಚರಿಸಿದ ಅವರು ರೈತರು ಈಗಲಾದರೂ ಎಚ್ಚೆತ್ತು ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಬೇಕು ಎಂದು ಕಿವಿಮಾತು ಹೇಳಿದರು.

ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಲಹೆ ಮಾರ್ಗದರ್ಶನ ಮತ್ತು ಮಣ್ಣು ಪರೀಕ್ಷೆಯನ್ನು ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು ಉಚಿತವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ರೋಟರಿ ಜಿಲ್ಲಾ ಉಪ ರಾಜ್ಯಪಾಲ ಅನಂತೇಗೌಡ ಮಾತನಾಡಿ ಭೂಮಿಯ ಫಲವತ್ತತೆಯನ್ನು ಕಾಪಾಡಲು ರೈತರು ಸಾವಯವ ಅಥವಾ ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ಪಿ.ತನೋಜ್ ಕುಮಾರ್ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಸಂರಕ್ಷಣೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರು ಮತ್ತು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ತಜ್ಞ ಡಾ. ನಾರಾಯಣ್ ಎಸ್ ಮಾವರ್ಕರ್ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ವಿಧಿ ವಿಧಾನಗಳ ಕುರಿತು ರೈತರಿಗೆ ವಿವರಿಸಿದರು. ರೊಟೇರಿಯನ್ ವೆಂಕಟೇಶ್ ಚೌಹಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ರೋಟೇರಿಯನ್ ರವೀಂದ್ರನಾಥ ನಾಯ್ಡು ರೋಟರಿ ಕಾಫಿ ಲ್ಯಾಂಡಿನ ಕಾರ್ಯದರ್ಶಿ ನಾಗೇಶ್ ಕೆಂಜಿಗೆ ಜಿಲ್ಲಾ ಯೋಜನಾ ಅಧ್ಯಕ್ಷ ಆರ್ ನಾಗೇಂದ್ರ ನಾಸೀರ್ ಹುಸೇನ್ ಗ್ರಾಪಂ ಅಧ್ಯಕ್ಷೆ ಭಾಗ್ಯ ನಾಗರಾಜ್ ರೈತ ಸಂಘದ ಮುಖಂಡ ಗುರುಶಾಂತಪ್ಪ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಎಸ್ ನಿರಂಜನ್ ಎನ್ ಪರಮೇಶಪ್ಪ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ವಿಜಯ್ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಯೋಗೇಶ್ ರೊಟೇರಿಯನ್ ಆನಂದ್ ಉಪಸ್ಥಿತರಿದ್ದರು.