ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದು ಬಳಿಕ ತಾನೂ ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸುಧಾರಾಣಿ (32) ಹಾಗೂ ಆಕೆಯ ಮಗಳು ಸಾನ್ವಿಯ (3) ಎಂದು ಗುರುತಿಸಲಾಗಿದೆ. ಸುಧಾರಾಣಿ ಹಾಗೂ ರವಿ ದಂಪತಿ ಆಗಾಗ ಕೌಟುಂಬಿಕ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಗಂಡನ ಮೇಲಿನ ಕೋಪಕ್ಕೆ ಮಗುವನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಗುರುವಾರದಂದು ಮನೆಯಿಂದ ಹೋಗಿರುವ ಗಂಡ ರವಿ ಮತ್ತೆ ಮನೆಗೆ ಬಂದಿಲ್ಲ ಎಂದು ತಿಳಿದುಬಂದಿದೆ. ರವಿ ನಾಪತ್ತೆ ಹಿಂದೆ ಸಣ್ಣ ಅನುಮಾನ ಇದ್ದು, ಹೆಂಡತಿ ಮಗಳನ್ನು ಕೊಂದು ಪರಾರಿಯಾದನಾ ಎಂಬ ಸಣ್ಣ ಅನುಮಾನವೂ ಮೂಡಿದೆ. ಈ ನಡುವೆ ವರದಕ್ಷಿಣೆ ಕಿರುಕುಳದ ಪ್ರಕರಣವೂ ರವಿ ವಿರುದ್ಧ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










