ಲಕ್ಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 5,95,212ರೂ. ನಿವ್ವಳ ಲಾಭಗಳಿಸಿದೆ: ಎಚ್.ಬಿ.ಉಮೇಶ್.

81
firstsuddi

ಚಿಕ್ಕಮಗಳೂರು: ತಾಲೂಕಿನ ಲಕ್ಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 5,95,212ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಬಿ.ಉಮೇಶ್ ಹೇಳಿದರು.

ತಾಲೂಕಿನ ಲಕ್ಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಂದು ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಾಭದಲ್ಲಿ ಶೇ.2ರಷ್ಟು ಡಿವಿಡೆಂಟನ್ನು ಸದಸ್ಯರಿಗೆ ವಿತರಿಸಲಾಗುವುದು. ಸದ್ಯದಲ್ಲೇ ಸಂಘದಕಟ್ಟಡದ ಮೇಲೆ ನೂತನ ಸಭಾಂಗಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನಿಂದ ನೀಡಲಾಗುವ ಸಾಲದ ಮೊತ್ತವನ್ನು ಮೂರು ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಸದಸ್ಯರು ಮತ್ತು ಶೇರುದಾರರ ಬೆಂಬಲದಿಂದಾಗಿ ಸಂಘ ಪ್ರತಿ ವರ್ಷ ಲಾಭಗಳಿಸುತ್ತಿದ್ದು, ಅಭಿವೃದ್ಧಿಯ ಹಾದಿಯಲ್ಲಿದೆ ಎಂದ ಅವರು, ಸದಸ್ಯರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಡಿ.ಎಂ.ಕೃಷ್ಣೆಗೌಡ ಮಾತನಾಡಿ, ಸಹಕಾರ ಸಂಘಗಳಲ್ಲಿ ಯಾವುದೇ ರಾಜಕಾರಣ ಇರಬಾರದು ಎಲ್ಲರೂ ಪಕ್ಷಾತೀತವಾಗಿ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಸಹಕಾರಿ ಸಂಸ್ಥೆಗಳು ಕೇವಲ ಲಾಭವನ್ನು ಮಾತ್ರ ಎದುರು ನೋಡದೆ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಂಘದ ಉಪಾಧ್ಯಕ್ಷ ಕೆ.ಎಂ.ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಆರ್.ಅಣ್ಣೇಗೌಡ ವಾರ್ಷಿಕ ವರದಿಯನ್ನು ಮಂಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್, ಜನತಾ ಬಜಾರ್ ಮಾಜಿ ಅಧ್ಯಕ್ಷ ಮಲ್ಲೇದೇವರಪ್ಪ, ನಿರ್ದೇಶಕರಾದ ಎಲ್.ಜಯಣ್ಣ, ಗೋಪಾಲಸ್ವಾಮಿ, ಹೆಚ್.ಕೆ.ಸಿದ್ದೇಗೌಡ, ಎಲ್.ಎನ್.ತೇಜು, ಮಂಜುಳಾ, ಸಾವಿತ್ರಮ್ಮ, ಎಲ್.ಕೆ.ಬಸವರಾಜ್, ಸಿಬ್ಬಂದಿಗಳಾದ ಎಲ್.ಈ.ಅನಿತಾ, ಎಲ್.ಎಂ. ಸಿದ್ದೇಶ್, ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.