ನವದೆಹಲಿ: ಜ್ಯುವೆಲ್ಲರಿ ಶಾಪ್ ಒಂದರ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ ಪ್ರಕರಣ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.
ಸಂಜೀವ್ ಜೈನ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಈ ಕಳ್ಳತನವಾಗಿದೆ. ಅವರು ಎರಡು ದಿನಗಳಿಂದ ಅಂಗಡಿ ಮುಚ್ಚಿದ್ದರು. ಇಂದು ಅಂಗಡಿ ತೆರೆದಾಗ ಇಡೀ ಅಂಗಡಿಯಲ್ಲಿ ಧೂಳು ತುಂಬಿತ್ತು. ಅಲ್ಲದೇ ಸಿಸಿ ಕ್ಯಾಮೆರಾಗಳಿಗೆ ಹಾನಿ ಮಾಡಲಾಗಿತ್ತು. ಬಳಿಕ ಅಂಗಡಿಯನ್ನು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಸ್ಟ್ರಾಂಗ್ ರೂಮ್ನ ಗೋಡೆಯಲ್ಲಿ ರಂಧ್ರ ಕೊರೆದಿದ್ದಾರೆ. ಬಳಿಕ ಟೆರೇಸ್ ಮೂಲಕ ಬಂದು ಸಿಸಿಟಿವಿಗಳಿಗೆ ಹಾನಿ ಮಾಡಿ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.










