ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರದಲ್ಲಿ ವಿವಾಹಿತ ಮಹಿಳೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಗೋಕಾಕ್ ತಾಲೂಕಿನ ನಿವಾಸಿಗಳಾದ ರಮೇಶ ಉದ್ದಪ್ಪ ಖಿಲಾರಿ, ದುರ್ಗಪ್ಪ ಸೋಮ್ಲಿಂಗ್ ವಡ್ಡರ್, ಯಲ್ಲಪ್ಪ ಸಿದ್ದಪ್ಪ ಗಿಸ್ನಿಂಗವ್ವಗೋಳ, ಕೃಷ್ಣ ಪ್ರಕಾಶ ಪೂಜೇರಿ, ರಾಮಸಿದ್ದ ಗುರುಸಿದ್ದಪ್ಪ ತಾಪ್ಸಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಬಸವರಾಜ್ ವಸಂತ್ ಖಿಲಾರಿ ತಲೆಮರೆಸಿಕೊಂಡಿದ್ದು, ಈತನಿಗಾಗಿ ಹುಡುಕಾಟ ಮುಂದುವರೆದಿದೆ.
ಸೆಪ್ಟೆಂಬರ್ 5ರಂದು ಈ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ಥ ಮಹಿಳೆ, ಶಿಕ್ಷಕರ ದಿನಾಚರಣೆಯಂದು ಹಳ್ಳಿಯಿಂದ ಬಂದು ಗೋಕಾಕ್ ನಗರ ಬಸ್ ನಿಲ್ದಾಣದಲ್ಲಿ ಪರಿಚಯಸ್ಥ ವ್ಯಕ್ತಿಯ ಜತೆಗೆ ನಿಂತಿದ್ದರು. ಈ ಮಹಿಳೆ ಬಸವರಾಜ ಖಿಲಾರಿ ಎನ್ನುವವರಿಗೂ ಪರಿಚಯವಿದ್ದರು. ಹೀಗಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ಬಸವರಾಜ್ ನೋಡಿದ್ದಾನೆ. ಬಳಿಕ ಟೀ ಕುಡಿಯಲು ಬನ್ನಿ ಎಂದು ಇಬ್ಬರನ್ನೂ ಆದಿತ್ಯ ನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಇಬ್ಬರನ್ನೂ ಒಳಗೆ ಹಾಕಿ ಹೊರಗಿನಿಂದ ಮನೆಯ ಬಾಗಿಲು ಹಾಕಿಕೊಂಡು ಹೋಗಿ ತನ್ನ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಂತರ ಮಧ್ಯಾಹ್ನದ ಸಮಯದಲ್ಲಿ ಮನೆಗೆ ಬಂದಿದ್ದ ಐದು ಜನರ ಗ್ಯಾಂಗ್, ಮಹಿಳೆಯನ್ನ ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಬಳಿಕ ಅವರಲ್ಲಿದ್ದ ಹಣ, ಚಿನ್ನಾಭರಣ ಹಾಗೂ ಎಟಿಎಂ ಕಾರ್ಡ್ ಕಸಿದುಕೊಂಡರು. ಕೊನೆಗೆ ಸಂತ್ರಸ್ತೆ ಹಾಗೂ ಅವರೊಂದಿಗೆ ಬಂದಿದ್ದ ಪುರುಷನನ್ನು ಜೊತೆಯಾಗಿ ನಿಲ್ಲಿಸಿ ವೀಡಿಯೋ ಮಾಡಿ ವೈರಲ್ ಮಾಡುವುದಾಗಿ ಧಮಕಿ ಹಾಕಿ ಕಳುಹಿಸಿದ್ದಾರೆ. ಈ ಹಿನ್ನೆಲೆ ಸಂತ್ರಸ್ಥ ಮಹಿಳೆ ದೂರು ನೀಡಲು ಹೆದರಿದ್ದಳು.
ಇನ್ನು ಸೆಪ್ಟೆಂಬರ್ 13ರಂದು ಡಕಾಯಿತಿ ಪ್ರಕರಣವೊಂದರಲ್ಲಿ ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ನಡೆಸಿದಾಗ ಗ್ಯಾಂಗ್ ರೇಪ್ ಮಾಡಿದ್ದನ್ನು ಆರೋಪಿಗಳು ತಾವಾಗಿಯೇ ಬಾಯ್ಬಿಟ್ಟಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮಹಿಳೆಯನ್ನು ಹುಡುಕಿ ಕರೆದುಕೊಂಡು ಬಂದು ಆಕೆಯಿಂದ ಕೇಸ್ ದಾಖಲಿಸಿಕೊಂಡಿದ್ದಾರೆ.










