ಬೆಂಗಳೂರು: ನಗರದ ಆಡುಗೋಡಿಯ ರಾಮಾಂಜನೇಯ ದೇವಾಲಯ ರಸ್ತೆಯಲ್ಲಿ ತಡರಾತ್ರಿ ನಡೆದ ಗಣೇಶ ವಿಸರ್ಜನೆ ಮೆರವಣೆಗೆ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಶ್ರೀನಿವಾಸ್ ಕೊಲೆಯಾದ ಯುವಕ. ಈತನ ಕೊಲೆಯ ಮೂಲಕ ಎರಡು ಗುಂಪುಗಳ ಜಗಳ ಅಂತ್ಯವಾಗಿದೆ. ಗಣಪತಿ ಬಿಡುವಾಗ ಯಾಕ್ರೋ ಇಲ್ಲಿ ಡ್ಯಾನ್ಸ್ ಮಾಡ್ತೀರಾ ಅಂದಿದ್ದಕ್ಕೆ ಗಲಾಟೆ ನಡೆದಿದ್ದು, ಲಾಂಗ್ ಮಚ್ಚುಗಳಿಂದ ಹೊಡೆದಾಟ ಮಾಡಿಕೊಂಡಿವೆ.
ಗಲಾಟೆಯಲ್ಲಿ ರಂಜಿತ್ ಎಂಬವನಿಗೂ ಗಂಭೀರ ಗಾಯಗಳಾಗಿದ್ದು, ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಲಾಟೆ ಬಿಡಿಸಲು ಬಂದ ಮೃತ ಶ್ರೀನಿವಾಸ್ ತಾಯಿಗೂ ಗ್ಯಾಂಗ್ ಚಾಕುವಿನಿಂದ ಇರಿದಿದೆ. ಇವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡದಂತೆ ಶ್ರೀನಿವಾಸ್ ಅವರಿಗೆ ಆರೋಪಿಗಳು ಮೊದಲೆ ಎಚ್ಚರಿಕೆ ನೀಡಿದ್ದರು. ಆದರೂ ತಡರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಶ್ರೀನಿವಾಸ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಕಂಡ ಆರೋಪಿಗಳು ಶ್ರೀನಿವಾಸ್ ಜೊತೆ ಗಲಾಟೆ ಮಾಡಿ, ಈ ಗಣೇಶ ಬಲಿ ಕೇಳುತ್ತಿದೆ ಎಂದು ಜೋರಾಗಿ ಕೂಗಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಲಾಂಗು, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಇನ್ನು ಗಲಾಟೆ ಸಂದರ್ಭದಲ್ಲಿ ಓರ್ವ ರೌಡಿಶೀಟರ್ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಘಟನೆ ಸಂಬಂಧ ಅಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.










