ನವದೆಹಲಿ: ಸಲಿಂಗ ವಿವಾಹಕ್ಕೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳನ್ನು ವಜಾಗೊಳಿಸಿದ ಕೋರ್ಟ್, ಕೇವಲ ಸಂಸತ್ತು ಮಾತ್ರ ವಿಶೇಷ ವಿವಾಹ ಕಾಯ್ದೆಯಲ್ಲಿ ಬದಲಾವಣೆ ತರಬಹುದು. ನ್ಯಾಯಾಲಯಗಳು ಕಾನೂನುಗಳನ್ನು ಮಾಡುವ ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತದೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ ಕಿಶನ್ ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್.ನರಸಿಂಹ ಅವರಿದ್ದ ಪೀಠಕ್ಕೆ 10 ದಿನಗಳ ಕಾಲ ವಿಚಾರಣೆ ನಡೆಸಿ ಮೇ 11ರಂದು ತೀರ್ಪು ಕಾಯ್ದಿರಿಸಿತ್ತು.
ಐದು ನ್ಯಾಯಾಧೀಶರು ಸಹ ಸಲಿಂಗ ವಿವಾಹವನ್ನು ಅನುಮತಿಸಲು ವಿಶೇಷ ವಿವಾಹ ಕಾಯ್ದೆ – 1954 ತಿರುಚಲು ಸಾಧ್ಯವಿಲ್ಲ ಎಂದು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.
ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ:
ಸಲಿಂಗ ದಂಪತಿ ಸಮುದಾಯಕ್ಕೆ ಯಾವುದೇ ರೀತಿಯ ತಾರತಮ್ಯವಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಳಜಿ ವಹಿಸಬೇಕು. ಅವರು ದೂರುಗಳನ್ನು ಸಲ್ಲಿಸಲು ದೂರವಾಣಿ ಸಂಖ್ಯೆ ಸ್ಥಾಪಿಸಬೇಕು. ಪೊಲೀಸರು ಕಿರುಕುಳ ನೀಡಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಿಜೆಐ ಸೂಚಿಸಿದರು.
ತೃತೀಯ ಲಿಂಗಿ ಸಮುದಾಯದ ವಿರುದ್ಧ ಸೇವೆಗಳ ಪೂರೈಕೆಯಲ್ಲಿ ಯಾವುದೇ ತಾರತಮ್ಯವನ್ನು ಮಾಡಬಾರದು. ಈ ಬಗ್ಗೆ ಸಾರ್ವಜನಿಕರನ್ನು ಜಾಗೃತಿಗೊಳಿಸಬೇಕು. ಸಲಿಂಗಿಗಳ ಸಮುದಾಯಕ್ಕಾಗಿ ಹಾಟ್‍ಲೈನ್ ರಚಿಸಿ, ಆ ದಂಪತಿಗಳಿಗೆ ಸುರಕ್ಷಿತ ಮನೆಗಳನ್ನು ನಿರ್ಮಿಸಬೇಕು. ಇಂಟರ್‌ಸೆಕ್ಸ್ ಮಕ್ಕಳನ್ನು ಬಲವಂತವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ವ್ಯಕ್ತಿಯನ್ನು ಯಾವುದೇ ಹಾರ್ಮೋನ್ ಚಿಕಿತ್ಸೆಗೆ ಒತ್ತಾಯಿಸಬಾರದು ಎಂದು ಸಿಜೆಐ ಚಂದ್ರಚೂಡ್ ಹೇಳಿದರು.










