ಐಸಿಸಿ ವಿಶ್ವಕಪ್ 2023: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ.

98
firstsuddi

ಪುಣೆ: ಧರ್ಮಶಾಲಾದಲ್ಲಿ ಅಕ್ಟೋಬರ್ 22ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಿಂದ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಹೊರಗುಳಿದಿದ್ದಾರೆ.

ಅಕ್ಟೋಬರ್ 19ರಂದು ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಹಾರ್ದಿಕ್ ಅವರ ಎಡ ಹಿಮ್ಮಡಿಗೆ ಗಾಯವಾಗಿತ್ತು. ಇದಾದ ನಂತರ ಮೈದಾನದಿಂದ ಹೊರಗೆ ಹೋದ ಅವರನ್ನು ಸ್ಕ್ಯಾನಿಂಗ್‍ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಪಾಂಡ್ಯ ಅವರಿಗೆ ಸ್ಕ್ಯಾನಿಂಗ್ ಮಾಡಿಸಲಾಗಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಅವರು ಬಿಸಿಸಿಐ ವೈದ್ಯಕೀಯ ತಂಡದ ನಿರಂತರ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಿದರು.

ಪಾಂಡ್ಯ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ ಅಕ್ಟೋಬರ್ 29ರಂದು ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ನೇರವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.