ಬೆಂಗಳೂರು: ಇಸ್ರೋದ ಬಹು ನಿರೀಕ್ಷಿತ ಮಾನವಸಹಿತ ಗಗನಯಾನ ಯೋಜನೆಯ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ವಾಹನ ಯಶಸ್ವಿಯಾಗಿ ಉಡಾವಣೆಯಾಗಿದೆ.
ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ಎರಡೂ ಮಾಡೆಲ್ಗಳನ್ನು ಹೊತ್ತು ರಾಕೆಟ್ ಸಾಗಿದ್ದು, ನೌಕೆಯನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಹಾರಿಸಲಾಗಿತ್ತು. ಸದ್ಯ ನೌಕೆ ಸಮುದ್ರಕ್ಕೆ ಬಿದ್ದಿದೆ. ಈ ಮೂಲಕ ನೌಕೆ ಸೇಫ್ ಲ್ಯಾಂಡಿಂಗ್ ಮಾಡಿದೆ.
ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಯಶಸ್ವಿಯಾಗಿ ನಡೆದಿದೆ. ರಾಕೆಟ್ನಿಂದ ಬೇರ್ಪಟ್ಟು ಕ್ರ್ಯೂ ಮಾಡೆಲ್ ಮತ್ತು ಕ್ರ್ಯೂ ಎಸ್ಕೇಪ್ ಮಾಡೆಲ್ಗಳು ಪ್ಯಾರಚೂಟ್ ಮೂಲಕ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿವೆ. ವಿಜ್ಞಾನಿಗಳ ತಂಡದ ಶ್ರಮದಿಂದ ನೌಕೆ ಪ್ರಯೋಗ ಯಶಸ್ವಿಯಾಗಿದೆ. ಹೀಗಾಗಿ ವಿಜ್ಞಾನಿಗಳಿಗೆ ಇಸ್ರೋ ಮುಖ್ಯಸ್ಥ ಸೋಮನಾಥ್ ಅಭಿನಂದನೆ ಸಲ್ಲಿಸಿದರು.
ಈ ಪರೀಕ್ಷೆ ಕೇವಲ 9 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು, ರಾಕೆಟ್ನಿಂದ ಬೇರ್ಪಟ್ಟು ಕ್ರ್ಯೂ ಮಾಡೆಲ್ ಮತ್ತು ಕ್ರ್ಯೂ ಎಸ್ಕೇಪ್ ಮಾಡೆಲ್ಗಳು ಪ್ಯಾರಚೂಟ್ ಮೂಲಕ ಯಶಸ್ವಿಯಾಗಿ ಬಂಗಾಳಕೊಲ್ಲಿಯಲ್ಲಿ ಇಳಿದಿವೆ. ಅಲ್ಲಿಂದ ಅದನ್ನು ಹಡಗಿನ ಮೂಲಕ ವಶಕ್ಕೆ ಪಡೆಯಲಾಗಿದೆ.
ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ಇಂದು ಬೆಳಗ್ಗೆ 8 ಗಂಟೆಗೆ ಶೆಡ್ಯೂಲ್ ಆಗಿತ್ತು. ಆದರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಕೆಲ ಕಾಲ ಮುಂದೂಡಿಕೆಯಾಗಿದ್ದು ಕೊನೆಗೆ ಬೆಳಗ್ಗೆ 10 ಗಂಟೆಗೆ ಉಡಾವಣೆ ಯಶಸ್ವಿಯಾಗಿದೆ. ಈ ಪ್ರಯೋಗದಿಂದ ನೌಕೆಯ ಸುರಕ್ಷತೆ ಹಾಗೂ ತುರ್ತು ಸಂದರ್ಭಗಳಲ್ಲಿ ಗಗನ ಯಾತ್ರಿಕರು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುವ ಕುರಿತು ಇಸ್ರೋ ಅಧ್ಯಯನ ನಡೆಸಲು ಸಹಾಯಕವಾಗಿದೆ. ನೌಕೆಯನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಉಡಾವಣೆ ಮಾಡಿ, ಅಲ್ಲಿಂದ ಸಮುದ್ರಕ್ಕೆ ಬೀಳಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ಮುಂದುವರೆಸಿದೆ.










