ವಿದ್ಯಾರ್ಥಿನಿ ಮೇಲೆ ಶೌಚಾಲಯ ತೊಳೆಯುವ ಆ್ಯಸಿಡ್ ಎರಚಿದ ಆರೋಪ- ಮುಖ್ಯಶಿಕ್ಷಕ ಅಮಾನತು…

59
firstsuddi

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿ ಚಿಕ್ಕನಹಳ್ಳಿಯ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಶುಚಿಗೊಳಿಸುವಾಗ 2ನೇ ತರಗತಿ ವಿದ್ಯಾರ್ಥಿನಿಗೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಮುಖ್ಯಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ಮುಖ್ಯಶಿಕ್ಷಕ ಜಿ.ರಂಗಸ್ವಾಮಿ ಅವರು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಸಿಂಚನಾ ಮೇಲೆ ಎರಚಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಆದರೆ ಟಾಯ್ಲೆಟ್ ಒಂದನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದನ್ನು ಕಂಡು ರಂಗಸ್ವಾಮಿ ಅವರು ತಾವೇ ಕ್ಲೀನ್ ಮಾಡಲು ಆರಂಭಿಸಿ, ಆ್ಯಸಿಡ್‌ ಅನ್ನು ನೆಲದ ಮೇಲೆ ಎರಚಿದ್ದಾರೆ. ಈ ವೇಳೆ ಅಲ್ಲಿಯೇ ನಿಂತಿದ್ದ ಸಿಂಚನಾಳಿಗೆ ಆ್ಯಸಿಡ್ ಸಿಡಿದಿದೆ. ಈ ಪರಿಣಾಮ ಸಿಂಚನಾಳ ಬೆನ್ನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಬಾಲಕಿಯ ತಾಯಿ ಪವಿತ್ರಾ ಆಗ್ರಹಿಸಿದ್ದರು. ಅದರಂತೆಯೇ ಈಗ ಮುಖ್ಯಶಿಕ್ಷಕ ರಂಗಸ್ವಾಮಿಯನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ.