ಕಟ್ಟಡದ ಬೇಸ್‌ಮೆಂಟ್‌ ನೀರಿನಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವು…

52
firstsuddi

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ ನೀರಿನಲ್ಲಿ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ನಗರದ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ.

ಅರ್ಷಲನ್ ಖಾನ್ (9) ಹಾಗೂ ಅಮೀನ್ ಖಾನ್ (7) ಮೃತ ದುರ್ದೈವಿಗಳು. ಕಟ್ಟಡದಲ್ಲಿ ನೀರನ್ನು ಬಿಡಲು ಬೇಸ್‌ಮೆಂಟ್‌ ನಲ್ಲಿ ನೀರು ಸಂಗ್ರಹಣೆ ಮಾಡಲಾಗಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದರಿಂದ ಮಕ್ಕಳು ಅಲ್ಲಿಗೆ ಆಟವಾಡಲು ಹೋಗುತ್ತಿದ್ದರು. ಹೀಗೆ ಆಟವಾಡಲು ತೆರಳಿದ್ದ ಇಬ್ಬರು ಮಕ್ಕಳು ನೀರಿನ ತೊಟ್ಟಿಯಲ್ಲಿ ಬಿದ್ದು ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಮಕ್ಕಳನ್ನು ಹುಡುಕಾಡಿದ್ದು, ಮಕ್ಕಳು ಆಟವಾಡುವ ಎಲ್ಲ ಸ್ಥಳದಲ್ಲಿ ಶೋಧ ಮಾಡಿದಾಗ ಕಟ್ಟಡದ ಕಡೆಗೆ ಹೋಗಿರಬಹುದು ಎಂದು ಪೋಷಕರು ನೋಡಿದ್ದಾರೆ. ಈ ವೇಳೆ ಕಟ್ಟಡದ ಬೇಸ್‌ಮೆಂಟ್‌ ನ ಸಂಪ್‌ನಲ್ಲಿ ಮಕ್ಕಳ ಚಪ್ಪಲಿ ತೇಲಾಡುತ್ತಿದ್ದು ಮಕ್ಕಳು ಇದರಲ್ಲಿ ಮುಳುಗಿರಬಹುದು ಎಂದು ಅನುಮಾನಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದಾಗ ಮಕ್ಕಳ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಈ ಘಟನೆಯು ಬನ್ನೇರುಘಟ್ಟ ರಸ್ತೆಯ ಪಕ್ಕದಲ್ಲಿರುವ ಕಟ್ಟಡದಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಸುದ್ದಗುಂಟೆ ಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.