ಮುಂದಿನ ಪೀಳಿಗೆ ಸುಖ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕಾದರೆ ನಾವು ಈಗಲೇ ನೈಸರ್ಗಿಕ ಕೃಷಿಗೆ ಮರಳಬೇಕು: ಚಂದ್ರಶೇಖರ ನಾರಣಾಪುರ.

43
firstsuddi

ಚಿಕ್ಕಮಗಳೂರು: ನಮ್ಮ ಮುಂದಿನ ಪೀಳಿಗೆ ಸುಖ, ಸಂತಸ, ನೆಮ್ಮದಿ ಮತ್ತು ಸಮೃದ್ಧಿಯಿಂದ ಬದುಕಬೇಕಾದರೆ ನಾವು ಈಗಲೇ ನೈಸರ್ಗಿಕ ಕೃಷಿಗೆ ಮರಳಬೇಕು ಎಂದು ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ಸಲಹೆ ಮಾಡಿದರು.

ಕುಂಭಕ ಓದುಗ ಬಳಗ ತಾಲೂಕಿನ ಕುಂದೂರಿನ ಬನವಾಸಿಯಲ್ಲಿ ನಿನ್ನೆ ಏರ್ಪಡಿಸಿದ್ದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ನೈಸರ್ಗಿಕ ಕೃಷಿ ವಿಷಯ ಕುರಿತ ಸಂವಾದ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಾಭದ ಆಸೆಗಾಗಿ ನಾವು ನಮ್ಮ ಪೂರ್ವಜರ ಸಹಜ ಕೃಷಿಯನ್ನು ಬಿಟ್ಟು ರಾಸಾಯನಿಕಗಳ ಬಳಕೆಯನ್ನು ಮಾಡಿದ ಪರಿಣಾಮ ಭೂಮಿ ಫಲವತ್ತತೆಯನ್ನು ಕಳೆದುಕೊಂಡು ಬರಡಾಗುತ್ತಿದೆ. ಅವೈಜ್ಞಾನಿಕ ಕೃಷಿಯಿಂದಾಗಿ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ರಾಸಾಯನಿಕಗಳನ್ನು ಬಳಸುವ ಮೂಲಕ ಭೂಮಿಯನ್ನು ರೋಗಗ್ರಸ್ತವಾಗಿಸಿದ್ದೇವೆ, ಜೀವ ವೈವಿಧ್ಯಗಳನ್ನು ನಾಶ ಮಾಡಿದ್ದೇವೆ ಎಂದು ವಿಷಾದಿಸಿದರು.

ರೈತರು ಈಗಲಾದರೂ ಎಚ್ಚೆತ್ತು ನಮ್ಮ ಪೂರ್ವಜರು ಮಾಡುತ್ತಿದ್ದ ಸಹಜ ಕೃಷಿಯತ್ತ ಮರಳಬೇಕು. ಆಗ ಮಾತ್ರ ಮುಂದಿನ ಪೀಳಿಗೆ ಸಮೃದ್ಧಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಕೆ.ಕೃಷ್ಣೇಗೌಡ, ಕೃಷಿಯೇ ಬೇಡ ಎನ್ನುವ ಹಂತಕ್ಕೆ ನಾವಿಂದು ತಲುಪಿದ್ದೇವೆ. ಹಿಂದೆ ಜಮೀನು ಇದ್ದವರಿಗೆ ಗೌರವ ಸಿಗುತ್ತಿತ್ತು. ಆದರೆ, ಇವತ್ತು ಜಮೀನನ್ನು ಮಾರುವ ಸ್ಥಿತಿಗೆ ನಾವು ಬಂದಿದ್ದೇವೆ. ಕೃಷಿಗಾಗಿ ಖರ್ಚು ಮಾಡಿದ ಅರ್ಧದಷ್ಟು ಹಣವನ್ನೂ ನಾವು ಪಡೆಯಲಾಗುತ್ತಿಲ್ಲ. ಹೆಂಡತಿ ಮಕ್ಕಳನ್ನು ಸಾಕಲಾಗುತ್ತಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲಾಗುತ್ತಿಲ್ಲ. ಇದಕ್ಕೆಲ್ಲ ಮೂಲ ಕಾರಣ ನಾವು ಪಾರಂಪರಿಕ ಕೃಷಿ ಪದ್ಧತಿಯನ್ನು ಕೈ ಬಿಟ್ಟಿರುವುದು, ಸಂಘಟಿತರಾಗದಿರುವುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಭಕ ಓದುಗ ಬಳಗದ ಅಧ್ಯಕ್ಷ ಕುಂದೂರು ಅಶೋಕ್, ಭಗವಾನ್ ಶ್ರೀ ಕೃಷ್ಣನ ಸಂದೇಶದಂತೆ ನಮ್ಮ ರೈತರು ಗೋವುಗಳನ್ನು, ಭೂಮಿಯನ್ನು, ನೀರನ್ನು ಮತ್ತು ಮರಗಿಡಗಳನ್ನು, ಪ್ರಕೃತಿಯನ್ನು ಪೂಜಿಸಬೇಕು ಎಂದು ಸಲಹೆ ಮಾಡಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯ್ ತಿರುಗುಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಜ ಕೃಷಿ ಪದ್ಧತಿಯ ಕುರಿತು ಈ ವೇಳೆ ಸಭಿಕರು ಮತ್ತು ಗಣ್ಯರ ನಡುವೆ ಸಂವಾದ ನಡೆಯಿತು.

ಗ್ರಾ.ಪಂ.ಮಾಜಿ ಅಧ್ಯಕ್ಷ ಜಗನ್ನಾಥ್, ಸದಸ್ಯರಾದ ಪ್ರಸನ್ನ, ರಾಘವೇಂದ್ರ, ಸಾಹಿತಿ ಡಿ.ಎಂ.ಮಂಜುನಾಥಸ್ವಾಮಿ ಉಪನ್ಯಾಸಕ ಪ್ರದೀಪ್ ಉಪಸ್ಥಿತರಿದ್ದರು.