ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್…

57
firstsuddi

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದ್ದು, ಹಳೇ ಡ್ರೈವರ್ ಕಿರಣ್ ಎಂಬಾತ ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ ಎಂಬುದು ಬಹಿರಂಗವಾಗಿದೆ.

ಕೊಲೆ ಮಾಡಿ ಆರೋಪಿ ಕಿರಣ್ ಚಾಮರಾಜನಗರಕ್ಕೆ ಪರಾರಿಯಾಗಿದ್ದ. ಮೊಬೈಲ್ ಲೋಕೆಷನ್ ಆಧರಿಸಿ ಆರೋಪಿ ಪತ್ತೆ ಮಾಡಿದ್ದಾರೆ. ಆರೋಪಿ ಕಿರಣ್ ಚಾಮರಾಜನಗರದ ಮಹಾದೇಶ್ವರ ಬೆಟ್ಟದಲ್ಲಿ ಇರೋ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಚಾಮರಾಜನಗರ ಪೊಲೀಸರು ಮಹಾದೇಶ್ವರ ಬೆಟ್ಟಕ್ಕೆ ಹೋಗಿ ಕಿರಣ್ ಹಿಡಿದಿದ್ದರು. ಬಳಿಕ ಬೆಂಗಳೂರು ಸುಬ್ರಮಣ್ಯ ಪುರ ಪೊಲೀಸರಿಗೆ ಒಪ್ಪಿಸಿದರು. ಬಳಿಕ ವಿಚಾರಣೆಯ ವೇಳೆ ಕಿರಣ್ ತಪ್ಪೊಪ್ಪಿಕೊಂಡಿದ್ದಾನೆ.

4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಕಿರಣ್ ಕಳೆದ ತಿಂಗಳು ಹೊಸ ಸರ್ಕಾರಿ ಕಾರು ಅಪಘಾತ ಮಾಡಿದ್ದನು. ಅಲ್ಲದೇ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ರೇಡ್ ಹೋಗುವ ಮಾಹಿತಿಯನ್ನು ಲೀಕ್ ಮಾಡುತ್ತಿದ್ದ. ಈ ಕಾರಣಕ್ಕೆ ಪ್ರತಿಮಾ ಅವರು ಕಿರಣ್​ಗೆ ಎಚ್ಚರಿಕೆ ನೀಡಿದ್ದರು.

ಕಿರಣ್ ನಡವಳಿಕೆಯಿಂದ ಕೋಪಗೊಂಡಿದ್ದ ಪ್ರತಿಮಾ, 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಈ ವೇಳೆ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದನು. ಆದರೆ ಪ್ರತಿಮಾ ಅವರು ಕಿರಣ್‍ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಪ್ರತಿಮಾ ಮೇಲೆ ದ್ವೇಷಕಾರಿದ್ದನು.

ಕೊಲೆ ದಿನವೂ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದಂಬಾಲು ಬಿದ್ದಿದ್ದನು. ಆದರೆ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಶನಿವಾರ ಪ್ರತಿಮಾ ಮನೆ ಬಳಿಯೇ ಕಾದು ಕುಳಿತು ಹೊಂಚು ಹಾಕಿ ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.