ಮಹಿಳೆಗೆ ಸಾಕುನಾಯಿ ಕಚ್ಚಿದ ಪ್ರಕರಣ- ವಿಚಾರಣೆಗೆ ಹಾಜರಾದ ನಟ ದರ್ಶನ್.

58
firstsuddi

ಬೆಂಗಳೂರು: ನೆರೆಮನೆಯ ಮಹಿಳೆಯೊಬ್ಬರಿಗೆ ಸಾಕುನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರು ಇಂದು ರಾಜರಾಜೇಶ್ವರಿ ನಗರದ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ದರ್ಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಮೂರು ದಿನದೊಳಗೆ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಿದ್ದರು. ಆದರೆ ದರ್ಶನ್ ಹಾಜರಾಗಿರಲಿಲ್ಲ. ಬಳಿಕ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದು, ಇಂದು ಬೆಳಗ್ಗೆ 11.30ಕ್ಕೆ ಠಾಣೆಗೆ ಬರುವಂತೆ ಸೂಚಿಸಿದ್ದರು.

ಅ.28ರಂದು ಖಾಸಗಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ದೂರುದಾರೆ ಅಮಿತಾ ಜಿಂದಾಲ್ ಎಂಬವರು ದರ್ಶನ್ ಮನೆ ಮುಂಭಾಗದ ರಸೆಯ ಖಾಲಿ ಜಾಗದಲ್ಲಿ ತಮ್ಮ ಕಾರು ಪಾರ್ಕ್ ಮಾಡಿದ್ದರು. ವಾಪಸ್ ತೆರಳಲು ಕಾರಿನ ಬಳಿ ಬಂದಾಗ ಅಕ್ಕಪಕ್ಕದಲ್ಲಿದ್ದ ಮೂರು ನಾಯಿಗಳನ್ನು ಕಂಡು ಅಮಿತಾ, ತಾವು ಕಾರು ಬಳಿ ಹೋಗಬೇಕು. ನಾಯಿಗಳನ್ನು ಕರೆದುಕೊಂಡು ಹೋಗಿ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ದರ್ಶನ್ ಅವರ ಮನೆ ಕೆಲಸಗಾರ ಗಲಾಟೆ ಮಾಡಿದರು ಎಂಬುದು ಅವರ ಆರೋಪ.

ಸಿಬ್ಬಂದಿ ಮತ್ತು ದೂರುದಾರರ ನಡುವೆ ವಾಗ್ವಾದ ನಡೆದ ತಕ್ಷಣವೇ ಎರಡು ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿದ್ದು, ಕಚ್ಚಿವೆ ಎಂದು ಆರೋಪಿಸಿ ಆರ್. ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.