ಚಿಕ್ಕಬಳ್ಳಾಪುರ: ಉಪನ್ಯಾಸಕನ ವಿರುದ್ಧ ಕಿರುಕುಳದ ಆರೋಪ ಮಾಡಿ ವಿದ್ಯಾರ್ಥಿಯೊಬ್ಬ ಸೆಲ್ಫಿ ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಹಳ್ಳಿ ಗ್ರಾಮದ ಲಲಿತಮ್ಮ ಹಾಗೂ ದೇವರಾಜು ದಂಪತಿಯ ಪುತ್ರ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವಾತ. ಈತ ನಗರದ ಬಿ.ಜಿ.ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಮೆಕ್ಯಾನಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಗಜೇಂದ್ರ ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದು, ತನ್ನ ಸಾವಿಗೆ ತನ್ನ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಕಾರಣ. ವಿನಃ ಕಾರಣ ತನ್ನನ್ನು ಟಾರ್ಗೆಟ್ ಮಾಡಿದ್ದು, ಸಹಪಾಠಿಗಳ ಸಮ್ಮುಖದಲ್ಲಿ ತನಗೆ ನಿಂದಿಸುವುದು, ನೋಟ್ ಬುಕ್ ಹರಿದು ಹಾಕುವುದನ್ನು ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ಬುಧವಾರ ರಾತ್ರಿ ಒಂದು ವೀಡಿಯೋ ಹಾಗೂ ನಿನ್ನೆ ಬೆಳಗ್ಗೆ ಮತ್ತೊಂದು ವೀಡಿಯೋ ಸೇರಿದಂತೆ ಎರಡು ವೀಡಿಯೋ ಮಾಡಿ ಗಜೇಂದ್ರ ಮನೆಯ ಮುಂಭಾಗದ ಹಳೆಯ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ಗಜೇಂದ್ರ ಮೊಬೈಲ್ ಪರಿಶೀಲನೆ ಮಾಡಿದಾಗ ಸೆಲ್ಫಿ ವೀಡಿಯೋ ಪತ್ತೆಯಾಗಿದ್ದು ಸಾವಿನ ಸತ್ಯ ಬಯಲಾಗಿದೆ.
ಘಟನೆಯಿಂದ ಆಕ್ರೋಶಗೊಂಡ ಆತನ ಸಂಬಂಧಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜು ಎದುರು ಪ್ರತಿಭಟನೆ ನಡೆಸಿ ಉಪನ್ಯಾಸಕ ಮಂಜುನಾಥ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.










