ಹಸುಗೂಸು ಮಾರಾಟ ಪ್ರಕರಣ: ನಕಲಿ ವೈದ್ಯ ಸೇರಿ ಇಬ್ಬರ ಬಂಧನ…

48
firstsuddi

ಬೆಂಗಳೂರು: ಹಸುಗೂಸುಗಳ ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ವೈದ್ಯ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ನಕಲಿ ವೈದ್ಯ ಕೆವಿನ್ ಹಾಗೂ ಮಧ್ಯವರ್ತಿಯಾಗಿದ್ದ ರಮ್ಯಾ ಎಂಬುವವರನ್ನು ಬಂಧಿಸಲಾಗಿದೆ. ನವಜಾತ ಶಿಶು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಈ ಪೈಕಿ 8 ಮಂದಿ ಮಹಿಳೆಯರಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದ ತನ್ನ ಸಂಬಂಧಿಯೊಬ್ಬಳು ಗರ್ಭಪಾತಕ್ಕೆ ಮುಂದಾಗಿದ್ದಾಗ ಬಂಧಿತ ಆರೋಪಿ ರಮ್ಯಾ ಆಕೆಗೆ ಹಣದ ಆಮಿಷ ಒಡ್ಡಿ, ಮಗುವಿಗೆ ಜನ್ಮ ನೀಡುವಂತೆ ಮಾಡಿದ್ದಳು. ಮಗುವಿಗೆ ಜನ್ಮ ನೀಡಿದ ನಂತರ ಆರೋಪಿ ರಮ್ಯಾ ಇತರೆ ಎಂಟು ಆರೋಪಿಗಳ ಸಹಾಯದಿಂದ ಮಗುವನ್ನು ಮಾರಾಟ ಮಾಡಿದ್ದಳು. ಮಗುವನ್ನು ಮಾರಾಟ ಮಾಡಲು ತನ್ನ ಸಂಬಂಧಿಕ ಮಹಿಳೆಗೆ ಕೆಲವು ಲಕ್ಷಗಳನ್ನು ನೀಡಿದ್ದಳು. ಅಲ್ಲದೆ, ಆಕೆಯ ಮದುವೆಗೂ ಸಹಾಯ ಮಾಡಿದ್ದಳು.

ರಾಜಾಜಿನಗರದಲ್ಲಿ ತನ್ನದೇ ಕ್ಲಿನಿಕ್ ನಡೆಸುತ್ತಿದ್ದ ಆರೋಪಿ ಕೆವಿನ್, ವಿದ್ಯಾಭ್ಯಾಸವನ್ನು ಅರ್ಧಕ್ಕೇ ಬಿಟ್ಟಿದ್ದ. ಬಳಿಕ ವೈದ್ಯರೊಬ್ಬರ ಬಳಿ ಸಹಾಯಕನಾಗಿ ಕೆವಿನ್ ಕೆಲಸ ಮಾಡುತ್ತಿದ್ದ. ಆನಂತರ ತಾನೇ ರಾಜಾಜಿನಗರದ 6ನೇ ಬ್ಲಾಕ್ ನಲ್ಲಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ಶುರು ಮಾಡಿದ್ದ. ಅಲ್ಲದೇ ಹಸುಗೂಸುಗಳ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಎಂಟು ಜನ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರ್. ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ಮಗು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳು, ಆರಂಭದಲ್ಲಿ ನಾಲ್ವರನ್ನು ಬಂಧಿಸಿದ್ದರೆ, ನಂತರ ನಾಲ್ವರನ್ನು ಬಂಧಿಸಿದ್ದರು.