ಕೊಡಗು: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿಂತಿದ್ದ ಕಾರಿನಲ್ಲಿ ವೈದ್ಯ ಶವವಾಗಿ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ಗ್ರಾಮದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಶಿವಳ್ಳಿ ನಿವಾಸಿಯಾಗಿರುವ ಡಾ.ಸತೀಶ್ ಮೃತ ವೈದ್ಯ. ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕೇಸ್ನಲ್ಲಿ ಸತೀಶ್ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಾ.ಸತೀಶ್ನನ್ನು ವಿಚಾರಣೆಗೆ ಕರೆದಿದ್ದರು. ಹೀಗಾಗಿ ಕಾರಿನಲ್ಲಿಯೇ ವಿಷದ ಇಂಜೆಕ್ಷನ್ ಪಡೆದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಿನ್ನೆ ಸಚಿವ ದಿನೇಶ್ ಗುಂಡೂರಾವ್ ಹುಳ್ಳೇನಹಳ್ಳಿ ಆಲೆಮನೆಗೆ ಭೇಟಿ ನೀಡಿದ್ದ ವೇಳೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದರು. ಈ ಪ್ರಕರಣದಲ್ಲಿ ಡಾ.ಸತೀಶ್ ಎಂಬವರು ಸಹ ಭಾಗಿಯಾಗಿದ್ದಾರೆ ಎಂದು ಸಚಿವರು ಆರೋಪ ಮಾಡಿದ್ದರು. ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಡಾ.ಸತೀಶ್ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಮೈಸೂರಿನ ಪಿರಿಯಾಪಟ್ಟಣದ ಕೋಣನೂರಿನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂತು.
ಡಾ.ಸತೀಶ್ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರಾಗಿ ಕೆಲಸ ಮಾಡುವುದರ ಜೊತೆಗೆ ಮಂಡ್ಯದ ಶಿವಳ್ಳಿಯಲ್ಲಿ ವೆಂಕಟೇಶ್ವರ ಎಂಬ ಖಾಸಗಿ ಕ್ಲಿನಿಕ್‌ನ್ನು ಇಟ್ಟುಕೊಂಡಿದ್ದರು. ಪ್ರತಿದಿನ ಸಂಜೆ 7 ಗಂಟೆಯ ನಂತರ ಈ ಕ್ಲಿನಿಕ್‌ನಲ್ಲೂ ಕೆಲಸ ಮಾಡುತ್ತಿದ್ದರು. ಕ್ಲಿನಿಕ್‌ಗೆ ಬರುತ್ತಿದ್ದ ಗರ್ಭಿಣಿಯರ ಪೈಕಿ ಭ್ರೂಣ ಪತ್ತೆ, ಹತ್ಯೆಯ ಆಸಕ್ತರಿಗೆ ಈ ಕರಾಳ ದಂಧೆ ನಡೆಸುತ್ತಿದ್ದವರನ್ನು ಸಂಪರ್ಕ ಮಾಡಲು ರೆಫರ್ ಮಾಡುತ್ತಿದ್ದರೆಂದು ಸ್ಥಳೀಯರು, ಸಚಿವ ದಿನೇಶ್ ಗುಂಡೂರಾವ್‌ಗೆ ತಿಳಿಸಿದ್ದಾರೆ. ಹೀಗಾಗಿಯೇ ಸತೀಶ್‌ಗೆ ನೋಟಿಸ್ ನೀಡಿ ಆತನ ಬಗ್ಗೆಯೂ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇದರ ಬೆನ್ನಲ್ಲೇ ಡಾ.ಸತೀಶ್ ಕುಶಾಲನಗರದ ಆನೆಕಾಡು ಬಳಿ ತಮ್ಮ ಕಾರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸದ್ಯ ವೈದ್ಯನ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










