ಕಾಫಿ ಬೆಳೆಗಾರ ಡಿ.ಎಂ.ವಿಜಯ್‍ಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕೆಂದು ಆಗ್ರಹ…

69
firstsuddi

ಚಿಕ್ಕಮಗಳೂರು: ಕಾಫಿ ಉದ್ಯಮದ ಹಿತದೃಷ್ಟಿಯಿಂದ ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಉಡುಪಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ರಾಜಕೀಯ ಪಕ್ಷಗಳನ್ನು ಒತ್ತಾಯಿಸುವ ನಿರ್ಣಯವನ್ನು ತಾಲೂಕಿನ ಹಾಂದಿ, ಮಾಚಗೊಂಡನಹಳ್ಳಿಯಲ್ಲಿ ಇಂದು ನಡೆದ ಕಾಫಿ ಬೆಳೆಗಾರರ ಸಭೆ ಕೈಗೊಂಡಿದೆ.

ಸಭೆಯಲ್ಲಿ ಮಾತನಾಡಿದ ಬಹುತೇಕ ಬೆಳಗಾರರು ಕಾಫಿ ಉದ್ಯಮದ ಪುನಶ್ಚೇತನಕ್ಕಾಗಿ ಕಾಫಿ ಬೆಳೆಗಾರರೂ ಆಗಿರುವ ಡಿ.ಎಂ.ವಿಜಯ್ ಅವರಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಸ್ವತಃ ಕಾಫಿ ಬೆಳೆಗಾರರಾಗಿರುವ ಡಿ.ಎಂ.ವಿಜಯ್ ಅವರು ಕಾಫಿ ಉದ್ಯಮದ ಮತ್ತು ಬೆಳೆಗಾರರ ಕಷ್ಟ ನಷ್ಟಗಳನ್ನು ಅನುಭವಿಸಿದ್ದಾರೆ. ಉದ್ಯಮದ ಸಂಕಷ್ಟ ಕಾಲದಲ್ಲಿ ಬೆಳೆಗಾರರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾಗಿ ಅವರು ಲೋಕಸಭಾ ಸದಸ್ಯರಾದರೆ ಬೆಳೆಗಾರರಿಗೆ ನ್ಯಾಯ ಒದಗಿಸುತ್ತಾರೆ. ಕಾಫಿ ಉದ್ಯಮದ ಗಂಧ ಗಾಳಿ ಗೊತ್ತಿಲ್ಲದವರಿಗೆ ಟಿಕೆಟ್ ನೀಡಿದರೆ ಕಾಫಿ ಉದ್ಯಮಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಆಲ್ದೂರಿನ ಕಾಫಿ ಬೆಳೆಗಾರ ಡಿ.ಸಿ.ಗಿರೀಶ್ ಮಾತನಾಡಿ, ಕಾಫಿ ಉದ್ಯಮ ನೆಲಕಚ್ಚಿ ಬೆಳೆಗಾರರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಡಿ.ಎಂ.ವಿಜಯ್ ಅವರು ಬೆಳೆಗಾರರಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಂದಿನ ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ ಅವರ ಮನವೊಲಿಸಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಹಲವು ಪ್ಯಾಕೇಜ್‍ಗಳನ್ನು ನೀಡುವಂತೆ ಮಾಡಿದ್ದರು. ಅದರಿಂದಾಗಿ ಅಂದು ಬೆಳೆಗಾರರು ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಕಾಫಿ ಬೆಳೆಗಾರ ಲವ ಮಾತನಾಡಿ, ಡಿ.ಎಂ.ವಿಜಯ್ ಅವರ ಸತತ ಹೋರಾಟದ ಫಲವಾಗಿ ಕಾಫಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಎಸ್‍ಸಿಟಿಎಲ್, ವಿದರ್ಭ ಮತ್ತು ಸಿಡಿಆರ್‌ಪಿ ಪ್ಯಾಕೇಜ್‍ಗಳನ್ನು ನೀಡಿತು. ಸಿಲ್ವರ್ ಮರಕ್ಕೆ ಮುಕ್ತ ಮಾರುಕಟ್ಟೆ ದೊರೆಯಿತು. ವಿಜಯ್ ಅವರು ಕಾಫಿ ಮಂಡಳಿ ಸದಸ್ಯರಾಗಿದ್ದಾಗ ಕಾಫಿ ಬೆಳಗಾರರಿಗೆ 600 ಕೋಟಿ ಸಹಾಯಧನವನ್ನು ಕೊಡಿಸಿದ್ದಾರೆ ಎಂದು ತಿಳಿಸಿದರು.

ಸತ್ತಿಹಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಪುಟ್ಟೇಗೌಡ ಮಾತನಾಡಿ, ಡಿ.ಎಂ.ವಿಜಯ್ ಅವರ ಹೋರಾಟದಿಂದಾಗಿ ಬೆಳೆಗಾರರು ಬದುಕುವಂತಾಗಿದೆ ಎಂದು ಹೇಳಿದರು.

ಸತ್ತಿಹಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಈರಪ್ಪಗೌಡ, ಕಾಫಿ ಬೆಳೆಗಾರರಾದ ಎಂ.ಬಿ.ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ ಮಾತನಾಡಿದರು.

ಡಿ.ಎಂ.ವಿಜಯ್ ಅವರಿಗೆ ಟಿಕೆಟ್ ನೀಡುವಂತೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಒಕ್ಕೊರಲಿನಿಂದ ಕೈಗೊಳ್ಳಲಾಯಿತು. ಕಾಫಿ ಬೆಳೆಗಾರರಾದ ಬಿ.ಕೆ.ರಮೇಶ್, ಸತೀಶ್ ಬಾರ್ಗಲ್, ಗೋಪಾಲಗೌಡ, ಜಯಂತ್, ಅಶ್ವಥ್, ಸೂರಪ್ಪನಹಳ್ಳಿ ಸತೀಶ್, ಕೆ.ಎನ್.ರೋಹಿತ್ ಸಭೆಯಲ್ಲಿ ಪಾಲ್ಗೊಂಡಿದ್ದರು.