ಅನುಮಾನಾಸ್ಪದವಾಗಿ ಗೃಹಿಣಿ ಸಾವು- ಪತಿ ವಿರುದ್ಧ ಕೊಲೆ ಶಂಕೆ ಆರೋಪ…

68
firstsuddi

ಚಿಕ್ಕಮಗಳೂರು: ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.

ಶ್ವೇತಾ (31) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಮೃತ ಗೃಹಿಣಿ ಪೋಷಕರು ಪತಿಯ ವಿರುದ್ಧ ಕೊಲೆ ಶಂಕೆ ಆರೋಪ ಮಾಡಿದ್ದಾರೆ.

ಮೂರು ವರ್ಷದ ಹಿಂದೆ ಶ್ವೇತಾ ದರ್ಶನ್ ಎಂಬವರನ್ನು ವಿವಾಹವಾಗಿದ್ದರು. ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ದೇವವೃಂದಕ್ಕೆ ದರ್ಶನ್ ಮತ್ತು ಶ್ವೇತಾ ಆಗಮಿಸಿದ್ದು, ಹೃದಯಾಘಾತವಾಗಿ ಶ್ವೇತಾ ಸಾವನ್ನಪ್ಪಿದ್ದಾಳೆ ಎಂದು ದರ್ಶನ್, ಪತ್ನಿಯ ಪೋಷಕರಿಗೆ ಮಾಹಿತಿ ನೀಡಿದ್ದಾನೆ.

ದರ್ಶನ್ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದು, ಮೃತಳ ಪೋಷಕರು ಅಂತ್ಯಕ್ರಿಯೆ ತಡೆದು ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ದರ್ಶನ್ ವಿರುದ್ಧ ಅನೈತಿಕ ಸಂಬಂಧದ ಆರೋಪವಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸದ್ಯ ಶ್ವೇತಾ ಮೃತದೇಹವನ್ನು ಜಿಲ್ಲೆಯ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.