ಸಾಕು ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಚಾಕು ಇರಿದ ದುಷ್ಕರ್ಮಿಗಳು…

48
firstsuddi

ಬೆಂಗಳೂರು ಗ್ರಾಮಾಂತರ: ಸಾಕು ನಾಯಿ ಬೊಗಳಿದ್ದಕ್ಕೆ ದುಷ್ಕರ್ಮಿಗಳು ಮಾಲೀಕನಿಗೆ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಚೀಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನು ಮಧುಕುಮಾರ್ (34) ಎಂದು ಗುರುತಿಸಲಾಗಿದೆ. ಚಾಕು ಇರಿತದ ರಭಸಕ್ಕೆ ಚಾಕುವಿನ ತುದಿಯ ಚೂರು, ದೇಹದೊಳಗೆ ಉಳಿದಿದೆ. ಆಸ್ಪತ್ರೆಯಲ್ಲಿ ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಚಾಕುವಿನ ಚೂರು ಇರುವುದು ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ಅದೇ ಗ್ರಾಮದ ಕಿಡಿಗೇಡಿಗಳು, ಮಧುಕುಮಾರ್ ಜೊತೆಗೆ ನಮ್ಮನ್ನು ನೋಡಿ ನಿಮ್ಮ ನಾಯಿ ಬೊಗಳುತ್ತಿದೆ ಬುದ್ದಿ ಹೇಳುವುದಕ್ಕೆ ಆಗಲ್ವಾ ಎಂದು ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾರೆ. ಜೊತೆಗೆ ನಾಯಿ ಮಾಲೀಕ ಮತ್ತು ಆಕೆಯ ಪತ್ನಿ ಮಮತಾ ಎಂಬುವವರಿಗೂ ದುಷ್ಕರ್ಮಿಗಳು ಥಳಿಸಿದ್ದಾರೆ. ಕೂಡಲೇ ಗಾಯಾಳು ಮಧುಕುಮಾರ್​ಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೃತ್ಯದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಅದೇ ಗ್ರಾಮದ ಸುನೀಲ್, ಅನೀಲ್ ದೇವರಾಜ್ ಹಾಗೂ ಅಜಯ್ ಎಂಬುವವರಿಂದ ಕೃತ್ಯ ನಡೆದಿರುವ ಆರೋಪ ಕೇಳಿಬಂದಿದೆ.