ಕಾಡುಗಳ್ಳ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಅನಾರೋಗ್ಯದಿಂದ ನಿಧನ…

44
firstsuddi

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಸಹಚರ, 1993ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಜ್ಞಾನಪ್ರಕಾಶ್ (69) ನಿಧನರಾಗಿದ್ದಾರೆ.

ಜಾಮೀನಿನ ಮೇಲೆ ಮೈಸೂರು ಜೈಲಿನಿಂದ 2022ರ ಡಿಸೆಂಬರ್20 ರಂದು ಬಿಡುಗಡೆಯಾಗಿದ್ದರು. 29 ವರ್ಷಗಳ ಕಾಲ ಬೆಳಗಾವಿ ಹಾಗೂ ಮೈಸೂರು ಜೈಲಿನಲ್ಲಿದ್ದರು. ಮೃತ ಜ್ಞಾನಪ್ರಕಾಶ್ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮಾನವೀಯತೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ 2022ರ ನ.26ರಂದು ಜಾಮೀನು ಮಂಜೂರು ಮಾಡಿತ್ತು.

ಜ್ಞಾನಪ್ರಕಾಶ್ , ಜಿಲ್ಲೆಯ ಹನೂರು ತಾಲೂಕು ಮಾರ್ಟಳ್ಳಿ ಸಮೀಪ ಸಂದನಪಾಳ್ಯದಲ್ಲಿ ವಾಸವಿದ್ದರು. ಅನಾರೋಗ್ಯದಿಂದ ಚೇತರಿಸಿಕೊಳ್ಳದ ಜ್ಞಾನಪ್ರಕಾಶ್, ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಂದನಪಾಳ್ಯದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಜ್ಞಾನಪ್ರಕಾಶ್ ಭಾಗಿಯಾಗಿದ್ದರು ಎಂದು ಮೈಸೂರಿನ ಟಾಡಾ ನ್ಯಾಯಾಲಯ 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. 2014 ರಲ್ಲಿ ಗಲ್ಲುಶಿಕ್ಷೆ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.