ಚಿಕ್ಕಮಗಳೂರು – ದಕ್ಷಿಣಕನ್ನಡದ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಸರ್ಕಾರಿ ಶಾಲೆಗಳನ್ನು ಸ್ಥಳೀಯ ಗ್ರಾಮಸ್ಥರು ಮತ್ತು ದಾನಿಗಳು ಅಭಿವೃದ್ದಿ ಪಡಿಸಲು ಮುಂದಾಗಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಸಲಹೆ ಮಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಿನ ಮಳಲೂರಿನ ಶ್ರೀದೇವಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಜುಂಜಮ್ಮ ಕೆ.ಎಸ್.ರುದ್ರೇಗೌಡ ಹಾಗೂ ಪ್ರೇಮಾ ಎಂ.ಜೆ.ಕೋದಂಡರಾಮಚಂದ್ರಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನು ಲಯನ್ಸ್ ಜಿಲ್ಲಾ ರಾಜ್ಯಪಾಲನಾದ ಅವಧಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಹಳಷ್ಟು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಣ್ಣಾರೆ ಕಂಡಿದ್ದೇನೆ, ಅಲ್ಲಿನ ಗ್ರಾಮಗಳ ಜನ ಮತ್ತು ದಾನಿಗಳು ಖಾಸಗೀ ಶಾಲೆಗಳಲ್ಲಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನೂ ಸರ್ಕಾರಿ ಶಾಲೆಗಳಿಗೆ ಒದಗಿಸಿದ್ದಾರೆ, ಅಲ್ಲಿನ ಎಲ್ಲಾ ಶಾಲೆಗಳಲ್ಲೂ ಹಳೇ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸಲಾಗಿದೆ, ಹಳೇ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳನ್ನು ಮರೆಯದೆ ಅವುಗಳ ಅಭಿವೃದ್ದಿಗೆ ದುಡಿಯುತ್ತಿದ್ದಾರೆ, ಅದರಿಂದಾಗಿ ಅಲ್ಲಿನ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದೆ ಹೀಗಾಗಿ ದಕ್ಷಿಣಕನ್ನಡ ಸಾಕ್ಷರತೆಯಲ್ಲಿ ಮುಂದಿದೆ ಎಂದರು.ದಕ್ಷಿಣಕನ್ನಡ ಜಿಲ್ಲೆಯ ಜನರನ್ನು ನಮ್ಮ ಜಿಲ್ಲೆಯಲ್ಲೂ ಮಾದರಿಯಾಗಿ ತೆಗೆದುಕೊಳ್ಳಬೇಕು, ಸ್ಥಳೀಯ ಗ್ರಾಮಸ್ಥರು ಮತ್ತು ದಾನಿಗಳು ಸ್ವಯಂ ಪ್ರೇರಣೆಯಿಂದ ತಮ್ಮ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಅವುಗಳನ್ನು ಅಭಿವೃದ್ದಿಪಡಿಸಬೇಕು ಎಂದು ಕಿವಿಮಾತು ಹೇಳಿದರು.
ಡಾ|| ಜೆ.ಪಿ.ಕೃಷ್ಣೇಗೌಡ ಹಾಗೂ ಸಾಹಿತಿ ದಿ|| ಪ್ರೊ|| ಚಂದ್ರಯ್ಯನಾಯ್ಡು ಬದುಕು ಬರಹ ವಿಷಯ ಕುರಿತು ಉಪನ್ಯಾಸ ನೀಡಿದ ಲೇಖಕಿ ವಾಣಿನಾಯ್ಡು ವೈದ್ಯರಾಗಿದ್ದ ಡಾ|| ಜೆ.ಪಿ.ಕೆ ಅವರನ್ನು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದ ಆಸ್ತಿಯನ್ನಾಗಿ ಮಾಡಿದವರು ಪ್ರೊ|| ಚಂದ್ರಯ್ಯನಾಯ್ಡು ಎಂದರು.ಹಳೆಗನ್ನಡ ಅರ್ಥೈಸುವಲ್ಲಿ ಗಮಕದ ಪಾತ್ರ ಕುರಿತು ಮಾತನಾಡಿದ ಗಮಕಿ ಎಸ್.ಎಲ್.ರಾಧಾಕೃಷ್ಣ ಪುರಾಣ ಮತ್ತು ನಮ್ಮ ಪೂರ್ವಜರ ಇತಿಹಾಸವನ್ನು ತಿಳಿದುಕೊಳ್ಳಲು ಗಮಕ ಅತ್ಯಂತ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ನಮ್ಮ ಪೂರ್ವಜರು, ಹಿರಿಯರು ಮತ್ತು ಇತಿಹಾಸದ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು, ಶ್ರದ್ದೆಯಿಂದ ಅವುಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.ಸಾಹಿತಿ ದಿ|| ಪ್ರೊ|| ಚಂದ್ರಯ್ಯನಾಯ್ಡು ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಸಾಹಿತ್ಯದ ಪುಸ್ತಕಗಳನ್ನು ವಿತರಿಸಲಾಯಿತು, ಅಂಬಳೆ ಹೋಬಳಿ ಕಸಾಪ ಅಧ್ಯಕ್ಷ ಕುಮಾರ್ ಕಂಬಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.ಇತ್ತೀಚೆಗೆ ನಿಧನರಾದ ಕವಿ ಡಾ|| ಸುಮತೀಂದ್ರ ನಾಡಿಗ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಗೌಡ, ಶಾಲೆಯ ಮುಖ್ಯಶಿಕ್ಷಕ ಎಂ.ಪಿ.ಚಂದ್ರೇಗೌಡ, ನಿವೃತ್ತ ಶಿಕ್ಷಕ ಕೆ.ಆರ್.ದಯಾನಂದ, ರೈತ ಸಂಘದ ಮುಖಂಡ ಕೆ.ಕೆ.ಕೃಷ್ಣೇಗೌಡ, ವಾಜುವಳ್ಳಿ ರಮೇಶ್ ಉಪಸ್ಥಿತರಿದ್ದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕರಾದ ಬಸವರಾಜಪ್ಪ ಸ್ವಾಗತಿಸಿದರು, ಸೋಮಶೇಖರ್ ವಂದಿಸಿದರು.
Home Breaking News ದಕ್ಷಿಣಕನ್ನಡದ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕು.- ಹೆಚ್.ಆರ್.ಹರೀಶ್…










