ಮೈಸೂರು: ನಿನ್ನೆ ರಾತ್ರಿ ಜಿಲ್ಲೆಯ ನಂಜನಗೂಡು ನಗರದಲ್ಲಿ ನಡೆದ ಮೆರವಣಿಗೆ ವೇಳೆ ದೇವರ ಮೇಲೆ ಎಂಜಲು ನೀರನ್ನು ಎಸೆದ ಆರೋಪದ ಮೇಲೆ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಸಂಬಂಧ ಐತಿಹಾಸಿಕ ನಂಜುಂಡೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್, ಅಭಿ ಎಂಬುವವರ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿ ಪಡಿಸಿದ್ದಾರೆ. ಕುಡಿಯುವ ನೀರಿನ ಬಾಟಲಿ ಮೂಲಕ ಉತ್ಸವ ಮೂರ್ತಿಗೆ ನೀರು ಎರಚಿ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನು ಅಪಮಾನ ಮಾಡುವ ಕೆಲಸ ಮಾಡಿಲ್ಲ ಎಂದು ದಲಿತ ಸಮಿತಿ ಸದಸ್ಯರಿಗೆ ತಿಳಿಸಿದೇವು. ಆದರೂ ಕೆಲ ಜನರು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟಲಿನಿಂದ ನೀರು ಎರಚ್ಚಿದ್ದಾರೆ. ಇದು ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿನ್ನೆ ರಾತ್ರಿ ‘ಅಂಧಕಾಸುರ ಸಂಹಾರ’ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಆಯೋಜಿಸಿತ್ತು. ಈ ವೇಳೆ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ದೇವಸ್ಥಾನದ ಬಳಿ ಇರುವ ರಾಕ್ಷಸ ಮಂಟಪದ ಬಳಿ ರಂಗೋಲಿಯಲ್ಲಿ ಚಿತ್ರಿಸಿದ ಅಂಧಕಾಸುರನ ಚಿತ್ರವನ್ನು ಅಳಿಸಿಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಪದ್ಧತಿಯಂತೆ ನಂಜುಂಡೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತವರು ಮಹಿಷಾಸುರನ ಚಿತ್ರದ ಸುತ್ತ ಮೂರು ಸುತ್ತುಗಳನ್ನು ಹಾಕಿ ಆ ಚಿತ್ರವನ್ನು ಅಳಿಸಿ ತೇರಿನ ಬೀದಿಗಳಲ್ಲಿ ಮುಂದಕ್ಕೆ ಸಾಗಬೇಕು. ಇದನ್ನು ನೂರಾರು ವರ್ಷಗಳಿಂದ ಆಚರಿಸಲಾಗುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸಮರ್ಥಿಸಿಕೊಂಡಿತು. ಈ ವೇಳೆ ಆರೋಪಿಗಳು ದೇವರ ಮೇಲೆ ಕಲುಷಿತ ನೀರನ್ನು ಎಸೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಮೂಲಗಳು ವಿವರಿಸಿವೆ.










