ಅಯೋಧ್ಯೆ: ವಿವಿಧ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಅವರು ರಾಮನೂರು ಅಯೋಧ್ಯೆಗೆ ಆಗಮಿಸಿದ್ದಾರೆ. ನೂತನ ವಿಮಾನ ನಿಲ್ದಾಣ ಹಾಗೂ ಅಭಿವೃದ್ಧಿಪಡಿಸಿದ ರೈಲ್ವೆ ನಿಲ್ದಾಣ ಉದ್ಘಾಟನೆ ನೆರವೇರಿಸುವುದಕ್ಕೂ ಮುನ್ನ ಸುಮಾರು 15 ಕಿಮೀ ರೋಡ್ ಶೋ ಹಮ್ಮಿಕೊಂಡಿದ್ದು, ಈಗಾಗಲೇ ರೋಡ್ ಶೋ ಆರಂಭಿಸಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ 10.45ರ ಸುಮಾರಿಗೆ ಅವರು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಾಲುಹೊದಿಸಿ ಪ್ರಧಾನ ಮಂತ್ರಿಯನ್ನು ಸ್ವಾಗತಿಸಿದರು.
ಅಯೋಧ್ಯೆಯಲ್ಲಿಂದು ಏನೇನು ಕಾರ್ಯಕ್ರಮ?
* ಬೆಳಗ್ಗೆ 10:45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
* ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ ಉದ್ಘಾಟನೆ
* 2 ಹೊಸ ಅಮೃತ್ ಭಾರತ್ & 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ
* 2183 ಕೋಟಿ ರೂ. ಗ್ರೀನ್ಫೀಲ್ಡ್ ಟೌನ್ಶಿಪ್ಗೆ ಅಡಿಗಲ್ಲು
* 300 ಕೋಟಿ ರೂ. ವಷಿಷ್ಠ ಕುಂಜ್ ವಸತಿ ಯೋಜನೆ
* ನವೀಕರಣಗೊಂಡಿರುವ ನಯಾಘಾಟ್ನಿಂದ ಲಕ್ಷ್ಮಣ ಘಾಟ್ ಉದ್ಘಾಟನೆ
( ದೀಪೋತ್ಸವ ಸ್ಥಳ, ಪ್ರವಾಸಿಗರಪಥವಾದ ರಾಮ್ ಕಿ ಪೌಡಿನಿಂದ ರಾಜ್ಘಾಟ್, ರಾಜ್ಘಾಟ್ನಿಂದ ರಾಮ ಮಂದಿರ ರಸ್ತೆ)
* ಅಯೋಧ್ಯೆ ನಗರದಲ್ಲಿ 4 ಹೊಸ ರಸ್ತೆಗಳ ಉದ್ಘಾಟನೆ
* ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮ ಜನ್ಮಭೂಮಿ ಪಥ (ಜೊತೆಗೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಲಖನೌ-ಅಯೋಧ್ಯ ಹೈವೇ, ಅಯೋಧ್ಯ ಬೈಪಾಸ್, ವಾರಣಾಸಿ ಬೈಪಾಸ್, ಖುತಾರ್-ಲಖೀಂಪುರ ಹೈವೇ ಸೇರಿವೆ )
* ಮಧ್ಯಾಹ್ನ 12:15ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ
* ಮಧ್ಯಾಹ್ನ 1 ಗಂಟೆ ಬಳಿಕ ಮೋದಿ ಮೆಗಾ ರೋಡ್ ಶೋ
* ಏರ್ಪೋರ್ಟ್ನಿಂದ ಅಯೋಧ್ಯೆ ನಗರದಲ್ಲಿ 15 ಕಿ.ಮೀ. ರೋಡ್ ಶೋ.
ಅಯೋಧ್ಯೆ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ‘ನಮ್ಮ ಸರ್ಕಾರ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಸಂಪರ್ಕವನ್ನು ಸುಧಾರಿಸಲು ಹಾಗೂ ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಿರ್ಧರಿಸಿದೆ. ಈ ದಿಸೆಯಲ್ಲಿ ನಾನು ನೂತನವಾಗಿ ನಿರ್ಮಿಸಲಾದ ವಿಮಾನ ನಿಲ್ದಾಣ, ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದೇನೆ. ಇದರೊಂದಿಗೆ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ಅಯೋಧ್ಯೆ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ನನ್ನ ಕುಟುಂಬ ಸದಸ್ಯರ ಬದುಕನ್ನು ಹಸನಗೊಳಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.










