ವರದಕ್ಷಿಣೆ ಆರೋಪ: ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಜೈಲುಪಾಲು…

56
firstsuddi

ಬೆಳಗಾವಿ: ವರದಕ್ಷಿಣೆ ಆರೋಪದ ಹಿನ್ನಲೆಯಲ್ಲಿ ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರರೊಬ್ಬರನ್ನು ಬಂಧಿಸಿದ ಘಟನೆ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.

ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ್‌ಡಿಸಿ ಆಗಿರುವ ಸಚಿನ್ ಪಾಟೀಲ್ ಬಂಧಿತ ವ್ಯಕ್ತಿ. ಈತ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಅರಿಶಿಣ ಕಾರ್ಯಕ್ರಮದಲ್ಲಿ 200 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ನೀಡುವಂತೆ ವಧುವಿನ ಮನೆಯವರಿಗೆ ಬೇಡಿಕೆ ಇಟ್ಟಿದ್ದಾನೆ. ವರನ ಬೇಡಿಕೆಗೆ ವಧುವಿನ ಸಂಬಂಧಿಕರು, ಮದುವೆಯಲ್ಲಿ ಪಾಲ್ಗೊಂಡ ಜನರು ತಬ್ಬಿಬ್ಬಾಗಿದ್ದಾರೆ. ಅಲ್ಲದೇ ನಾವು ಬಡವರು ಇಷ್ಟೊಂದು ಹಣ, ಚಿನ್ನಾಭರಣ ಎಲ್ಲಿಂದ ಕೊಡೋದು ಎಂದು ವಧುವಿನ ಪೋಷಕರು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ವರದಕ್ಷಿಣೆ ಕೊಡದ ಹಿನ್ನೆಲೆ ಹಳದಿ ಕಾರ್ಯಕ್ರಮ ನಡೆಯುವಾಗಲೇ ಮಂಟಪದಿಂದ ವರ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಾನು ಹಳದಿ ಕಾರ್ಯದಲ್ಲಿ ಪಾಲ್ಗೊಳ್ಳಲ್ಲ ಎಂದು ಹೈಡ್ರಾಮ ನಡೆಸಿದ್ದಾನೆ. ಈ ವೇಳೆ ಮದುವೆ ದಿನ ವಿಚಿತ್ರವಾಗಿ ನಡೆದುಕೊಂಡ ವರನಿಗೆ ಹುಡುಗಿ ಮನೆಯವರು ಗೂಸಾ ನೀಡಿದ್ದು, ಕಲ್ಯಾಣ ಮಂಟಪದಿಂದ ಎಸ್ಕೇಪ್ ಆಗಲು ಯತ್ನಿಸಿದ್ದ ವರನನ್ನು ರೂಂನಲ್ಲೇ ಲಾಕ್ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ವಿವರ:-
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮವೊಂದರ ಯುವತಿ ಜೊತೆಗೆ ಸಚಿನ್ ಪಾಟೀಲ್ ನಿಶ್ಚಿತಾರ್ಥ ಆಗಿತ್ತು. ಇದ್ದ ಒಬ್ಬಳೇ ಹೆಣ್ಣುಮಗಳನ್ನು ಸರ್ಕಾರಿ ನೌಕರ ಎಂಬ ಕಾರಣಕ್ಕೆ ಸಚಿನ್‌ಗೆ ಕೊಡಲು ವಧುವಿನ ಪೋಷಕರು ನಿರ್ಧರಿಸಿದ್ದರು. ಇವರಿಬ್ಬರ ನಿಶ್ಚಿತಾರ್ಥ ಆರು ತಿಂಗಳ ಹಿಂದೆ ನಡೆದಿತ್ತು. ನಿಶ್ಚಿತಾರ್ಥ ಸಮಯದಲ್ಲೇ 25 ಸಾವಿರ ವರದಕ್ಷಿಣೆ, 50 ಗ್ರಾಂ ಚಿನ್ನಾಭರಣ ಕೊಡುವುದಾಗಿ ಮಾತುಕತೆ ಮಾಡಿದ್ದರು. ಇದರ ಜೊತೆಗೆ ಮದುವೆಯನ್ನು ತಾವೇ ಮಾಡಿಕೊಡುವುದಾಗಿ ಹುಡುಗಿ ಪೋಷಕರು ತಿಳಿಸಿದ್ದರು. ಈ ಮಾತುಕತೆಗೆ ಉಭಯ ಕುಟುಂಬಸ್ಥರೂ ಒಪ್ಪಿಗೆ ಸೂಚಿಸಿದ್ದರು.

ನಿಶ್ಚಿತಾರ್ಥ ಬಳಿಕ ಯುವತಿ ಜೊತೆ ಯುವಕ ದೈಹಿಕ ಸಂಬಂಧ ಬೆಳೆಸಿದ್ದ ಎಂದು ತಿಳಿದುಬಂದಿದೆ. ನಾಲ್ಕೈದು ಸಲ ಯುವತಿ ಜೊತೆ ದೈಹಿಕ ಸಂಪರ್ಕ ಸಾಧಿಸಿದ್ದ ಎನ್ನಲಾಗ್ತಿದೆ. ಸಚಿನ್ ಪಾಟೀಲನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಚಿನ್ ಪಾಟೀಲ್ ವಿರುದ್ಧ ಖಾನಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 303 (ಕೊಲೆ ಬೆದರಿಕೆ), ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಐಪಿಸಿ ಸೆಕ್ಷನ್ 420 (ವಂಚನೆ) ಪ್ರಕರಣ ದಾಖಲು ಮಾಡಲಾಗಿದೆ.