ಕನ್ನಡ ನಾಮಫಲಕ ಹೋರಾಟ ಪ್ರಕರಣ: ಜೈಲಿನಿಂದ ಬಿಡುಗಡೆಯಾಗಿದ್ದ ನಾರಾಯಣ ಗೌಡ ಮತ್ತೆ ಅರೆಸ್ಟ್…

43
firstsuddi

ಬೆಂಗಳೂರು: ಕನ್ನಡ ನಾಮಫಲಕ ಹೋರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.

ಶನಿವಾರ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ನಾರಾಯಣ ಗೌಡ ಬಿಡುಗಡೆಯಾಗಿದ್ದರು. ಬಿಡುಗಡೆ ಆಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ನಾರಾಯಣ ಗೌಡರನ್ನು ಜೈಲಿನ ಮೊದಲ ಗೇಟ್‌ನಲ್ಲೇ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಇದೀಗ ಮಾರ್ಥಾಸ್ ಆಸ್ಪತ್ರೆಯಲ್ಲಿ ನಾರಾಯಣಗೌಡ ಅವರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬಳಿಕ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

2017ರ ಸಾರ್ವಜನಿಕ ಆಸ್ತಿನಾಶ, ಅಧಿಕಾರಿಗಳಿಗೆ ಅಡ್ಡಿ ಪ್ರಕರಣದಲ್ಲಿ ಮತ್ತೆ ನಾರಾಯಣ ಗೌಡರನ್ನು ಬಂಧಿಸಲಾಗಿದೆ. ಪೊಲೀಸರು ನಾರಾಯಣಗೌಡರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಕೋರ್ಟ್ ಆದೇಶದ ಮೇಲೆ ನಾರಾಯಣ ಗೌಡ ಇಂದೇ ಬಿಡುಗಡೆಯಾಗುತ್ತಾರೋ ಇಲ್ಲವೋ ಎನ್ನುವುದು ನಿರ್ಧಾರವಾಗಲಿದೆ.

ಇನ್ನು ನಾರಾಯಣಗೌಡ ಅವರ ಜೊತೆ ಬಿಡುಗಡೆಯಾದ 28 ಮಂದಿ ಕರವೇ ಕಾರ್ಯಕರ್ತರನ್ನು ಬಿಎಂಟಿಸಿ ಬಸ್ ಮೂಲಕ ಮನೆಗಳಿಗೆ ಕಳುಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.