ತುಮಕೂರು: ಮಧುಗಿರಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಹಾಸ್ಟೆಲ್ ನಲ್ಲಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿರುವ ಪ್ರಕರಣದ ಸಂಬಂಧ ವಸತಿ ನಿಲಯದ ಮಹಿಳಾ ವಾರ್ಡನ್ನನ್ನು ಅಮಾನತುಗೊಳಿಸಲಾಗಿದೆ.
ಹಾಸ್ಟೆಲ್ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದರೂ ಅದನ್ನು ಗಮನಿಸದೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ವಾರ್ಡನ್ ನಿವೇದಿತಾ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಆದೇಶದಲ್ಲಿ ತಿಳಿಸಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಿವಾಸಿಯಾಗಿರುವ ಬಾಲಕಿ ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸದ್ಯ ಈಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಹೊಟ್ಟೆ ನೋವಿನಿಂದ ತಾಯಿಯ ಜೊತೆಗೆ ಬಾಗೇಪಲ್ಲಿ ಆಸ್ಪತ್ರೆಗೆ ತೆರಳಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆಸ್ಪತ್ರೆ ಸಿಬ್ಬಂದಿ ಬಾಲಕಿಯ ಸ್ಕ್ಯಾನಿಂಗ್ ಹಾಗೂ ಇತರ ವೈದ್ಯಕೀಯ ಪರೀಕ್ಷೆ ಮಾಡಿದಾಗ ಏಳು ತಿಂಗಳು ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಸ್ಥಳೀಯ ಯುವಕನ ಜೊತೆ ಬಾಲಕಿ ಲೈಂಗಿಕ ಸಂರ್ಪಕದಲ್ಲಿದ್ದಳು ಎನ್ನಲಾಗುತ್ತಿದೆ.
ಬೆಂಗಳೂರು ಮೂಲದ ಹುಡುಗ ತನ್ನ ಸಂಬಂಧಿಕರ ಮನೆಗೆ ಬಂದು ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಬಾಲಕಿಯ ಹೇಳಿಕೆ ಆಧರಿಸಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಬಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.










