7 ವರ್ಷಗಳ ಹಿಂದೆ 29 ರಕ್ಷಣಾ ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿದ್ದ ಐಎಎಫ್ ವಿಮಾನದ ಅವಶೇಷಗಳು ಪತ್ತೆ…

43
firstsuddi

ನವದೆಹಲಿ: ಏಳು ವರ್ಷಗಳ ಹಿಂದೆ ಕಾರ್ಯಾಚರಣೆಯ ವೇಳೆ 29 ರಕ್ಷಣಾ ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಲ್ಲಿ 3.1 ಕಿಮೀ ಆಳದಲ್ಲಿ ಪತ್ತೆಯಾಗಿವೆ ಎಂದು ನಿನ್ನೆ ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.

ಚೆನ್ನೈ ಮೂಲದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ(ಎನ್‌ಐಒಟಿ) ವಿಜ್ಞಾನಿಗಳು ಕಳೆದ ತಿಂಗಳು ಬಹು-ಬೀಮ್ ಸೋನಾರ್(ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್) ಸೇರಿದಂತೆ ಸಮುದ್ರದ ಆಳದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಎಯುವಿ ವಾಹನವನ್ನು ವಿಮಾನ ಅವಘಡ ಸಂಭವಿಸಿದ್ದ ಸ್ಥಳದಲ್ಲಿ ನಿಯೋಜಿಸಿದ್ದರು. ಎಯುವಿ ವಾಹನ 3.1 ಕಿ.ಮೀ. ಆಳದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ.

ಮಲ್ಟಿ-ಬೀಮ್ ಸೋನಾರ್ (ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್), ಸಿಂಥೆಟಿಕ್ ಅಪರ್ಚರ್ ಸೋನಾರ್ ಮತ್ತು ಹೈ-ರೆಸಲ್ಯೂಶನ್ ಛಾಯಾಗ್ರಹಣ ಸೇರಿದಂತೆ ಹಲವು ಪೇಲೋಡ್‌ಗಳನ್ನು ಬಳಸಿಕೊಂಡು 3,400 ಮೀಟರ್ ಆಳದಲ್ಲಿ ಹುಡುಕಾಟ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಹುಡುಕಾಟದ ಚಿತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ಎಎನ್-32 ವಿಮಾನದ್ದು ಎಂದು ಕಂಡುಬಂದಿದೆ. ಸಂಭವನೀಯ ಅಪಘಾತದ ಸ್ಥಳದಲ್ಲಿ ಇದು ಸಿಕ್ಕಿದ್ದು, ಅದೇ ಪ್ರದೇಶದಲ್ಲಿ ಯಾವುದೇ ಕಾಣೆಯಾದ ವಿಮಾನದ ವರದಿಯ ಯಾವುದೇ ದಾಖಲಿತ ಇತಿಹಾಸವಿಲ್ಲದೇ, ಅವಶೇಷಗಳು ಬಹುಶಃ ಅಪಘಾತಕ್ಕೀಡಾದ ಐಎಎಫ್ ಎಎನ್-32 (ಕೆ-2743) ಗೆ ಸೇರಿದೆ ಎಂದು ಸೂಚಿಸುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಎನ್-32 ವಿಮಾನವು ಜುಲೈ 22, 2016 ರಂದು ಚೆನ್ನೈನ ತಾಂಬರಂ ಏರ್ ಫೋರ್ಸ್ ಸ್ಟೇಷನ್‌ನಿಂದ ಟೇಕ್ ಆಫ್ ಆಗಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ತೆರಳುತ್ತಿದ್ದಾಗ ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು.