ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿಯಲ್ಲಿ ಬೋಯಿಂಗ್ನ ಅತ್ಯಾಧುನಿಕ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಆವಿಷ್ಕಾರ ಕ್ಯಾಂಪಸ್ ಅನ್ನು ಉದ್ಘಾಟಿಸಿದರು.
ಈ ಕ್ಯಾಂಪಸ್ ಬೋಯಿಂಗ್ ಕಂಪನಿಯ ಅತಿ ದೊಡ್ಡ ಹೂಡಿಕೆಯಾಗಿದೆ. 43 ಎಕರೆ ಪ್ರದೇಶದಲ್ಲಿ 1,600 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ಬಿಐಇಟಿಸಿ ಕೇಂದ್ರದಿಂದ ಜಾಗತಿಕ ಏರೋಸ್ಪೇಸ್ ಉದ್ಯಮದ ಪ್ರಗತಿಗೆ ನೆರವು ನೀಡಲಾಗುತ್ತಿದೆ. 3,000ಕ್ಕೂ ಹೆಚ್ಚು ಇಂಜಿನಿಯರ್ಗಳನ್ನು ಹೊಂದುವ ಗುರಿಯನ್ನು ಬಿಐಇಟಿಸಿ ಹಾಕಿಕೊಂಡಿದೆ.
ಏನಿದು ಬೋಯಿಂಗ್ ಸುಕನ್ಯಾ ಯೋಜನೆ?
ದೇಶಾದ್ಯಂತ ಹೆಚ್ಚು ಹೆಣ್ಣು ಮಕ್ಕಳು ವೈಮಾನಿಕ ವಲಯಕ್ಕೆ ಸೇರಲು ನೆರವಾಗುವ ಉದ್ದೇಶ ಹೊಂದಿರುವ ಬೋಯಿಂಗ್ ಸುಕನ್ಯಾ ಯೋಜನೆ. ಈ ಕಾರ್ಯಕ್ರಮ ಹೆಣ್ಣು ಮಕ್ಕಳಿಗೆ ಪ್ರಮುಖ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕೌಶಲಗಳನ್ನು ಸಂಪಾದಿಸಲು ಅವಕಾಶ ಕಲ್ಪಿಸಲಿದೆ. ಹೆಣ್ಣುಮಕ್ಕಳನ್ನು ವೈಮಾನಿಕ ಉದ್ಯೋಗಗಳಿಗೆ ಸಿದ್ಧಗೊಳಿಸಲಿದೆ.
ಬಾಲಕಿಯರಿಗಾಗಿ ಬೋಯಿಂಗ್ ಸುಕನ್ಯಾ ಯೋಜನೆ 150 ಸ್ಥಳಗಳಲ್ಲಿ ಕೌಶಲ್ಯ ತರಬೇತಿ ಪ್ರಯೋಗಾಲಯಗಳನ್ನು ತೆರೆಯಲಿದೆ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಉತ್ತೇಜನ ನೀಡಲಿರುವ ಯೋಜನೆ. ಈ ಯೋಜನೆಯಡಿ ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಬಾಲಕಿಯರಿಗೂ ವಿದ್ಯಾರ್ಥಿ ವೇತನ ಸಿಗಲಿದೆ.
ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಉಪಸ್ಥಿತರಿದ್ದರು.










