ಅಯೋಧ್ಯೆ: ಬರೋಬ್ಬರಿ 5 ಶತಮಾನಗಳ ಕಾಯುವಿಕೆಗೆ ಇದೀಗ ಅಂತ್ಯ ಬಿದ್ದಿದೆ. ಅಯೋಧ್ಯೆ ರಾಮಮಂದಿರ ಕೊನೆಗೂ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ.
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಇಂದು ನೆರವೇರಿದೆ. ಅಯೋದ್ಯಾನಗರಿಯಲ್ಲಿ ಮರ್ಯಾದಾ ಪುರುಷೋತ್ತಮ ವಿರಾಜಮಾನನಾಗಿದ್ದಾನೆ. 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್ ಮುಹೂರ್ತದಲ್ಲಿ (ʼಅಭಿಜಿತ್ʼ ಅಂದ್ರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದಕ್ಕೂ ಮುನ್ನ ಪ್ರಧಾನಿಯವರ ಸಾರಥ್ಯದಲ್ಲಿ ಮೂಲ ವಿಗ್ರಹದ ಎದುರು ವಿಧಿ-ವಿಧಾನಗಳನ್ನು ನೆರವೇರಿತು. ಗರ್ಭಗುಡಿಯಲ್ಲಿ ಪೂಜಾ-ಕೈಂಕರ್ಯಗಳು ನಡೆದವು. ಬಳಿಕ ಬಾಲರಾಮನ ಹಣೆಗೆ ಮೋದಿ ತಿಲಕವಿಟ್ಟರು.
ಮಧ್ಯಾಹ್ನ 12.20 ಕ್ಕೆ ಸರಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದು 12, 45ರವರೆಗೆ ನಡೆದಿದೆ. ಸುಮಾರು 2 ಗಂಟೆಗಳ ಕಾಲ 25 ರಾಜ್ಯದಗಳ ವಿವಿಧ ಸಂಗೀತ ವಾದ್ಯಗಳ ಮಂಗಲ ಧ್ವನಿ ಕಾರ್ಯಕ್ರಮವೂ ನೆರವೇರಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಿನ್ನೆಲೆ ಅಯೋಧ್ಯೆಯ ಇಡೀ ನಗರವನ್ನು 2500 ಕ್ವಿಂಟಾಲ್‌ಗೂ ಹೆಚ್ಚು ಹೂವಿನಿಂದ ಅಲಂಕರಿಸಲಾಗಿದ್ದು, ಪ್ರಾಣ ಪ್ರತಿಷ್ಠೆಯ ನಂತರ ಭಕ್ತರಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಆದರೆ ಜನಸಂದಣಿ ಕಡಿಮೆಯಾದ ನಂತರ ಜನವರಿ 27ರ ನಂತರವೇ ದೇವಾಲಯಕ್ಕೆ ಭೇಟಿ ನೀಡುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಕ್ತರಲ್ಲಿ ವಿನಂತಿ ಮಾಡಿದೆ.
ಈ ದಿನಕ್ಕಾಗಿ ಪ್ರಧಾನಿಯವರು ಕಳೆದ 11 ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದರು. ಈ ನಡುವೆ ಹಲವಾರು ದೇಗುಲಗಳಿಗೆ ತೆರಳಿ ಪೂಜೆಯನ್ನೂ ಸಲ್ಲಿಸಿದ್ದರು. ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಹಲವಾರು ಗಣ್ಯರು ಸೇರಿದಂತೆ ಸಾವಿರಾರು ಮಂದಿ ಈ ಕ್ಷಣಕ್ಕೆ ಸಾಕ್ಷಿಯಾದರು.










