ಫೆ.10ಕ್ಕೆ ಗಡಿಹಳ್ಳಿಯಲ್ಲಿ ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನ- ಸಮ್ಮೇಳನಾಧ್ಯಕ್ಷರಾಗಿ ಟಿ ನಿಂಗಪ್ಪ ಆಯ್ಕೆ…

61
firstsuddi

ಚಿಕ್ಕಮಗಳೂರು:- ಕರ್ನಾಟಕ ಜಾನಪದ ಪರಿಷತ್ತಿನಿಂದ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಫೆ.10 ರಂದು ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನ ನಡೆಯಲಿದ್ದು, ಜಿಲ್ಲೆಯ ಹಿರಿಯ ರಂಗಕಲಾವಿದ ಟಿ ನಿಂಗಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗಡಿ ಹಳ್ಳಿಯ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಹಿರಿಯ ವೀರಗಾಸೆ ಕಲಾವಿದ ಡಾ ಮಾಳೇನಹಳ್ಳಿ ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಸಮ್ಮೇಳನದಲ್ಲಿ ಜಾನಪದ ಕಲಾವಿದರನ್ನು ಗೌರವಿಸುವುದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಸಮ್ಮೇಳನದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸುವ ಕುರಿತು ತೀರ್ಮಾನಿಸಲಾಯಿತು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ ಬಿ ಸುರೇಶ್ ಮಾತನಾಡಿ ಜನಪದ ಸಾಹಿತ್ಯ ಒಗಟು ಗಾದೆ ಹಾಡು ಮತ್ತು ನಾಟಕಗಳ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿರುವ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಟಿ ನಿಂಗಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತಮಗೆ ಹೆಮ್ಮೆ ತಂದಿದೆ ಎಂದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವಿವಿಧ ಜಾನಪದ ಕಲಾತಂಡಗಳ ನಡುವೆ ವೈಭವದಿಂದ ನಡೆಸಲಾಗುವುದು ಸಮ್ಮೇಳನದಲ್ಲಿ ವಿವಿಧ ಜಾನಪದ ಗೋಷ್ಠಿಗಳು ನಡೆಯಲಿದ್ದು ಅವುಗಳ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಜ್ಜಂಪುರ ತಾಲ್ಲೂಕು ಗೌರವಾಧ್ಯಕ್ಷ ಮರುಳಸಿದ್ದಪ್ಪ ಮಾತನಾಡಿ ಸಮ್ಮೇಳನದಲ್ಲಿ ವಿವಿಧ ಜಾನಪದ ಪ್ರಾಕಾರಗಳ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖಂಡ ಮಂಜಣ್ಣ ಇಡೀ ಗ್ರಾಮ ಒಗ್ಗೂಡಿ ಸಮ್ಮೇಳನದ ಯಶಸ್ಸಿಗೆ ದುಡಿಯಬೇಕು ಎಂದು ಮನವಿ ಮಾಡಿದರು.

ಹಿರಿಯ ಜಾನಪದ ಕಲಾವಿದೆ ಮುಗುಳಿ ಲಕ್ಷ್ಮೀದೇವಮ್ಮ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯ ಮಂಜಣ್ಣ ಗ್ರಾಪಂ ಅಧ್ಯಕ್ಷ ತಿಮ್ಮಯ್ಯ ಜಿಎಸ್ ತಿಪ್ಪೇಶ್ ಕಾಂಗ್ರೆಸ್ ಮುಖಂಡ ನಿರಂಜನ್ ಚಿಕ್ಕನಲ್ಲೂರು ಜಯಣ್ಣ ಶಿಕ್ಷಕ ಅಣ್ಣಯ್ಯ ಯುವರಾಜ್ ಪರಮೇಶ್ವರಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.