ವೇದಿಕೆ ಮೇಲೆಯೇ ಕುಸಿದು ಬಿದ್ದು ಹನುಮಂತನ ಪಾತ್ರಧಾರಿ ಸಾವು…

45
firstsuddi

ಚಂಡೀಗಢ: ಹನುಮಂತನ ಪಾತ್ರಧಾರಿಯೊಬ್ಬರು ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.

ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಇವರು ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಭಿವಾನಿಯ ಜವಾಹರ್ ಚೌಕ್ ಪ್ರದೇಶದಲ್ಲಿ ಭಗವಾನ್ ರಾಮನ ಗೌರವಾರ್ಥ ರಾಜ್ ತಿಲಕ್ ಎಂಬ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಲೀಲಾ ಸ್ಕಿಟ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹರೀಶ್ ಮೆಹ್ತಾ ಅವರು ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಕಾರ್ಯಕ್ರಮವು ಹಾಡಿನ ಮೂಲಕ ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆಗಳನ್ನು ಒಳಗೊಂಡಿತ್ತು. ಹಾಡಿನ ಮುಕ್ತಾಯದ ನಂತರ, ಹರೀಶ್ ಮೆಹ್ತಾ, ಹನುಮಾನ್ ಪಾತ್ರದಲ್ಲಿ, ಭಗವಾನ್ ರಾಮನ ಪಾದಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕಿತ್ತು. ಹರೀಶ್ ರಾಮನ ಪಾದಗಳಿಗೆ ನಮಸ್ಕರಿಸುತ್ತಿದ್ದಂತೆ, ಇದ್ದಕ್ಕಿದ್ದಂತೆ ಕುಸಿದುಬಿದ್ದರು, ತಕ್ಷಣ ಅಲ್ಲಿದ್ದ ಪ್ರೇಕ್ಷಕರು ಆಘಾತಗೊಂಡರು. ಸ್ವಲ್ಪ ಸಮಯದವರೆಗೆ, ಪ್ರೇಕ್ಷಕರು ಇದು ನಾಟಕದ ಭಾಗವೆಂದು ತಿಳಿದಿದ್ದರು. ಆದರೆ ಕೆಲಹೊತ್ತಾದರೂ ಮೆಹ್ತಾ ಅವರು ಎದ್ದೇಳಲೇ ಇಲ್ಲ. ಇದರಿಂದ ಆತಂಕಗೊಂಡ ಜನ ತಕ್ಷಣವೇ ಕಾರ್ಯಪ್ರವೃತ್ತರಾದರು.

ಕೂಡಲೇ ಸ್ಥಳೀಯರು ಮೆಹ್ತಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಹೃದಯಾಘಾತವಾಗಿರುವುದಾಗಿ ವೈದರು ಹೇಳಿದ್ದಾರೆ.

ಹರೀಶ್ ಮೆಹ್ತಾ ಅವರು, ಕಳೆದ 25 ವರ್ಷಗಳಿಂದ ಹಲವಾರು ರಾಮಲೀಲಾ ಸ್ಕಿಟ್‌ಗಳಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು.