ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರ್ ಅವರದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ.

45
firstsuddi

ಬೆಂಗಳೂರು: ಕನ್ನಡದ ಪೂಜಾರಿ ಎಂದೇ ಜನಪ್ರಿಯರಾಗಿರುವ ಹಿರಿಯ ಸಾಹಿತಿ, ವಾಗ್ಮಿ ಹಿರೇಮಗಳೂರು ಕಣ್ಣನ್‌ಗೆ ನೀಡಿದ್ದ ಅರ್ಚಕ ಹಣವನ್ನು ವಾಪಸ್ ನೀಡುವ ಕುರಿತಂತೆ ನೋಟಿಸ್ ನೀಡಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ ಇಂದು ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದು, ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರ್ ಅವರದ್ದೇ ತಪ್ಪೆಂದು ಹೇಳಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂದೇಶ ಪ್ರಕಟಿಸಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಸ್‌ ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಸೀಲ್ದಾರ್ ತಪ್ಪಿದೆಯೇ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ನ್ನು ಹಿಂಪಡೆಯಲು ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಹಿರೇಮಗಳೂರು ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಸೀಲ್ದಾರರು, ಹೀಗಾಗಿ ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ: ಹಿರೇಮಗಳೂರು ಕಣ್ಣನ್ ಅವರು ಕಳೆದ 44 ವರ್ಷಗಳಿಂದ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಣ್ಣನ್‌ಗೆ ವೇತನ ತಡೆಹಿಡಿದು ಚಿಕ್ಕಮಗಳೂರು ಜಿಲ್ಲಾಡಳಿತವು ಕಳೆದ ತಿಂಗಳು ನೋಟಿಸ್ ನೀಡಿತ್ತು. ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂಪಾಯಿ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು.

ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂಪಾಯಿ ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂಪಾಯಿಯಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು. ಸದ್ಯ ಪ್ರತಿ ತಿಂಗಳು ಬರುತ್ತಿದ್ದ ಸಂಬಳವನ್ನು ತಡೆ ಹಿಡಿಯಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದರು.

ತಹಶೀಲ್ದಾರ್ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ, ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದರು.