ಬೆಂಗಳೂರು: ಡೇ ಕೇರ್ ಸೆಂಟರ್ ನ 3ನೇ ಮಹಡಿಯಿಂದ ಬಿದ್ದು, ಗಂಭೀರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ.
ಕೇರಳ ಮೂಲದ ಟೆಕ್ಕಿ ದಂಪತಿ ಜಿಟೋ ಟಾಮಿ ಜೋಸೆಫ್, ಬಿನಿಟೋ ಥಾಮಸ್ ಪುತ್ರಿ ಜಿನಾ ಮೃತ ಮಗು. ಜನವರಿ 22 ರ ಮಧ್ಯಾಹ್ನ ಖಾಸಗಿ ಫ್ರೀ ಸ್ಕೂಲ್ (ನರ್ಸರಿ) ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಹಾಗಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಬ್ಬಾಳ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ಬಾಲಕಿ ಗೋಡೆ ಹತ್ತಿ ಕೆಳಗೆ ಬಿದ್ದ ನಂತರವೂ ಶಾಲೆಯ ಅಧಿಕಾರಿಗಳು ಗಮನಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಗೆ ನಿಜವಾದ ಕಾರಣವನ್ನು ಅಧಿಕಾರಿಗಳು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಬಾಲಕಿ ಡೇಕೇರ್‌ನಲ್ಲಿ ಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದಿದ್ದು, ವಾಂತಿ ಮಾಡಿಕೊಂಡಿದ್ದಾಳೆ. ನಂತರ ಶಾಲೆಯವರು ಮೂರನೇ ಮಹಡಿಯಿಂದ ಬಿದ್ದಿದ್ದಾಳೆ ಎಂದು ಒಪ್ಪಿಕೊಳ್ಳಲು ಮುಂದೆ ಬಂದರು. ಅಲ್ಲದೇ ಆಕೆ ಎತ್ತರ ಪ್ರದೇಶ ಹೋಗಲು ಹೆದರುತ್ತಿದ್ದಳು. ಟೆರೇಸ್‌ಗೆ ಹೋಗಿರುವ ಸಾಧ್ಯತೆಯಿಲ್ಲ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ.
ಈ ಸಂಬಂಧ ಶಾಲೆ ಹಾಗೂ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ತನಿಖೆ ಕೈಗೊಂಡಿದ್ದಾರೆ.










