ಶಾಲಾ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ- ನಾಲ್ವರು ವಿದ್ಯಾರ್ಥಿಗಳ ಸಾವು…

55
firstsuddi

ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದಲ್ಲಿ ನಡೆದಿದೆ.

ಸಾಗರ ಕಡಕೋಳ (17), ಶ್ವೇತಾ (13), ಗೋವಿಂದ(13), ಬಸವರಾಜ (17) ಮೃತ ವಿದ್ಯಾರ್ಥಿಗಳು. ಮೃತರು ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಪಿಯುಸಿ, ಮತ್ತಿಬ್ಬರು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಮೃತರು ಅಲಗೂರು ಗ್ರಾಮದ ಬಳಿ ಇರುವ ಶ್ರೀ ವರ್ಧಮಾನ ಮಹಾವೀರ ಅಲ್ಪಾಂಖ್ಯಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಕವಟಗಿ ಗ್ರಾಮದ ಕಡೆ ಶಾಲಾ ಬಸ್​ನಲ್ಲಿ ಹೊರಡುವಾಗ ದುರಂತ ಸಂಭವಿಸಿದೆ.

ಇನ್ನೂ ಘಟನೆಯಲ್ಲಿ ಎಂಟಕ್ಕೂ ಅಧಿಕ ಮಕ್ಕಳಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಜಗದೀಶ್ ಗುಡಗುಂಟಿ ಭೇಟಿ ನೀಡಿದರು. ಈ ವೇಳೆ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೇ ಮಾಜಿ ಶಾಸಕ ಆನಂದ ನ್ಯಾಮಗೌಡ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಪರಿಹಾರ ಕೊಡಿಸುವುದಾಗಿ ಇಬ್ಬರೂ ನಾಯಕರು ಭರವಸೆ ನೀಡಿದರು.