ಸೈಫರ್ ಪ್ರಕರಣ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಖುರೇಷಿಗೆ 10 ವರ್ಷ ಜೈಲು ಶಿಕ್ಷೆ…

52
firstsuddi

ಇಸ್ಲಾಮಾಬಾದ್: ಸೈಫರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಶಾ ಮೊಹಮ್ಮದ್ ಖುರೇಷಿಗೆ ಪಾಕಿಸ್ತಾನ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ದೇಶದ ಗೌಪ್ಯತೆ ಸೋರಿಕೆಗೆ ಸಂಬಂಧಿಸಿದ ಸೈಫರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಬುವಲ್ ಹಸ್ನಾತ್ ಮುಹಮ್ಮದ್ ಜುಲ್ಕರ್ನೈನ್ ಅವರು ಇಂದು ಈ ಆದೇಶವನ್ನು ನೀಡಿದ್ದಾರೆ ಎಂದು ಇಮ್ರಾನ್ ಖಾನ್ ಅವರ ವಕೀಲ ಶೋಯೆಬ್ ಶಾಹೀನ್ ಅವರು ತಿಳಿಸಿದ್ದಾರೆ. ಇಮ್ರಾನ್ ಖಾನ್ ಜೊತೆಗೆ ಮಾಜಿ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಕೂಡ ಇದೇ ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆ ಅನುಭವಿಸಲಿದ್ದಾರೆ ಎಂದಿದ್ದಾರೆ.

ಇಮ್ರಾನ್ ಖಾನ್ ಅವರು ಪ್ರಧಾನಿ ಆಗಿದ್ದ ವೇಳೆ ಅಮೆರಿಕ ಸರ್ಕಾರದ ವಿದೇಶಾಂಗ ಇಲಾಖೆ ಹಾಗೂ ಪಾಕಿಸ್ತಾನದ ರಾಯಭಾರಿ ನಡುವೆ ನಡೆದಿದ್ದ ಮಾತುಕತೆಯ ವಿವರಗಳನ್ನು ಬಹಿರಂಗವಾಗಿ ದೇಶದ ಜನತೆ ಮುಂದೆ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದರು.

ಸಾಮಾನ್ಯವಾಗಿ ಒಂದು ದೇಶ ಮತ್ತೊಂದು ದೇಶದ ಜೊತೆ ಅಧಿಕೃತ ವಿದೇಶಾಂಗ ವ್ಯವಹಾರದ ಮಾತುಕತೆ, ರಾಯಭಾರಿ ಮಟ್ಟದ ಸಂವಹನಗಳು ನಡೆದಾಗ ಅವು ಗುಪ್ತ ಲಿಪಿಯಲ್ಲಿ ಇರುತ್ತವೆ. ಅದನ್ನು ಸಾಮಾನ್ಯ ಭಾಷೆಗೆ ಪರಿವರ್ತಿಸಿ ಬಹಿರಂಗಗೊಳಿಸುವಂತಿಲ್ಲ. ಆದರೆ, ಇಮ್ರಾನ್ ಖಾನ್ ಈ ದಾಖಲೆಯನ್ನು ಬಹಿರಂಗ ಮಾಡುವ ಮೂಲಕ ಸರ್ಕಾರಿ ರಹಸ್ಯ ದಾಖಲೆ ಕಾಯ್ದೆ ಉಲ್ಲಂಘನೆ ಮಾಡಿದ್ಧಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಇದರ ಆಧಾರದ ಮೇಲೆ ಇದೀಗ ನ್ಯಾಯಾಲಯ ಇಮ್ರಾನ್‌ ಖಾನ್‌ಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.