ಹೆಣ್ಣು ಮಕ್ಕಳು ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನ ತಿಳಿದಿರಬೇಕು: ವಿಶಾಲ ನಾಗರಾಜು.

63
firstsuddi

ಮೂಡಿಗೆರೆ: ಹೆಣ್ಣು ಮಕ್ಕಳಿಗೆ ಕಾನೂನಿನಲ್ಲಿ ವಿಶೇಷ ಸ್ಥಾನ ಇರುವುದರಿಂದ ಇದರ ಸದುಪಯೋಗ ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕೆಂದು ವಕೀಲೆ ವಿಶಾಲ ನಾಗರಾಜ್ ಹೇಳಿದರು.

ನಾಗರಾಜ್ ಅವರು ಇತ್ತೀಚೆಗೆ ಲೇಡಿ ಜೇಸಿ ವತಿಯಿಂದ ಪಟ್ಟಣದ ಬಾಲಕೀಯ ಪದವಿಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಚಲಾಯಿಸಲು ಕಾನೂನಿನಲ್ಲಿ ನೂರಾರು ಅವಕಾಶವಿದೆ. ವಿದ್ಯಾರ್ಥಿ ದೆಸೆಯಿಂದಲೇ ಪಠ್ಯ ಪುಸ್ತಕದೊಂದಿಗೆ ಕಾನೂನಿನ ಬಗ್ಗೆ ಕೂಡ ಅರಿತುಕೊಂಡಿರಬೇಕೆಂದು ಹೇಳಿದರು.

ಶಾಲೆ ಮುಖ್ಯ ಶಿಕ್ಷಕ ಶಿವರಾಮೇಗೌಡ ಮಾತನಾಡಿ, ಹೆಣ್ಣುಮಕ್ಕಳ ಶಾಲೆಯಲ್ಲಿ ಜೇಸಿ ಸಂಸ್ಥೆ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಿಂದೆ ಹೆಣ್ಣು ಮಕ್ಕಳೆಂದರೆ ತಾತ್ಸಾರ ಮನೋಭಾವ ಇತ್ತು. ಆದರೆ ಪ್ರಸಕ್ತ ಕಾಲದಲ್ಲಿ ಅದು ತೊಲಗಿದ್ದರೂ ಕೆಲ ಕಡೆ ಭ್ರೂಣ ಹತ್ಯೆ ಮಾಡುವುದು ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ಜೇಸಿ ಅಧ್ಯಕ್ಷ ಸುಪ್ರಿತ್, ಜೇಸಿರೇಟ್ ಅಧ್ಯಕ್ಷೆ ದಿವ್ಯಾ ಸುಪ್ರಿತ್, ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಕವಿತಾ ಸಂತೋಷ್, ನಿಷ್ಚಿತಾ ಯತೀಶ್, ಹಮೀದ್ ಸಬ್ಬೇನಹಳ್ಳಿ, ಸುನಿಲ್, ಪ್ರೇಮಾ ಪುಣ್ಯಮೂರ್ತಿ, ಶೃತಿ ಸಂಪತ್, ಶೃತಿ ದೀಕ್ಷಿತ್ ಉಪಸ್ಥಿತರಿದ್ದರು.