ಅತಿಥಿ ಶಿಕ್ಷಕರ ನೆರವಿಗೆ ಸರಕಾರ ಬರಬೇಕು: ಬಸವರಾಜ್

51
firstsuddi

ಮೂಡಿಗೆರೆ: ವಿದ್ಯಾರ್ಥಿಗಳ ಭವ್ಯ ರೂಪಿಸುವಲ್ಲಿ ಜಿಲ್ಲೆಯ ಅತಿಥಿ ಶಿಕ್ಷಕರು ಹೆಚ್ಚು ಶ್ರಮ ವಹಿಸಿ ಶಿಕ್ಷಣ ನೀಡುತ್ತಿದ್ದಾರೆ. ಅತಿಥಿ ಶಿಕ್ಷಕರನ್ನು ಸರಕಾರ ಖಾಯಂಗೊಳಿಸುವ ಮೂಲಕ ಅತಿಥಿ ಶಿಕ್ಷಕರ ನೆರವಿಗೆ ಬರಬೇಕೆಂದು ಅತಿಥಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕರಡಿಗುಡ್ಡ ಹೇಳಿದರು.

ಬಸವರಾಜ್ ಕರಡಿಗುಡ್ಡ ಅವರು ಇತ್ತೀಚಗೆ ಪಟ್ಟಣದ ಲ್ಯಾಂಪ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅತಿಥಿ ಶಿಕ್ಷಕರ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಅನೇಕ ವರ್ಷದಿಂದ ಅಲ್ಪ ಸಂಭಾವನೆಗೆ ಅತಿಥಿ ಶಿಕ್ಷಕರು ಇತರೇ ಸರಕಾರಿ ಶಿಕ್ಷಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಿರುವ ಬೆಲೆ ಏರಿಕೆಯಿಂದಾಗಿ ಕುಟುಂಬ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗಿದೆ. ಹಾಗಾಗಿ ಅತಿಥಿ ಶಿಕ್ಷಕರಿಗೆ ಉತ್ತಮ ವೇತನ ನೀಡಬೇಕು. ಜತೆಗೆ ಎಲ್ಲಾ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಬೇಕೆಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ ಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅತಿಥಿ ಶಿಕ್ಷಕರೆಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ಶಿಕ್ಷಕರು ಸಂಘಟನೆಯನ್ನು ಬಲಪಡಿಸಿಕೊಂಡು ತಮ್ಮ ಬೇಡಿಕೆಯನ್ನು ನ್ಯಾಯಯುತವಾಗಿ ಈಡೇರಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಮಂಜಪ್ಪ, ರಾಜ್ಯ ಸಂಘದ ಅಧ್ಯಕ್ಷ ಎಚ್.ಹನುಮಂತ್, ಎಚ್.ಕೆ.ಲತಾ, ಆನಂದ, ಶುಭ, ಕೀರ್ತಿ, ಹರೀಶ್, ರವಿ ಮತ್ತಿತರರಿದ್ದರು.