ಪ್ರೀತಿಸಿ ಮದುವೆಯಾಗಿ ತಿಂಗಳೊಳಗೆ ಬಿಟ್ಟು ಹೋದ ಪತ್ನಿ- ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ…

56
firstsuddi

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದಾಗಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.

ಮೃತನನ್ನ ವಿನೋದ್ ರಾಜ್ (24) ಎಂದು ಗುರುತಿಸಲಾಗಿದೆ. ಮೃತ ಯುವಕ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿದ್ದ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿನೋದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತ ಯುವಕ ಅದೇ ಊರಿನ ಯುವತಿಯೋರ್ವಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಕಳೆದ ಡಿ.10 ರಂದು ಇಬ್ಬರ ವಿವಾಹ ಸಹ ಆಗಿತ್ತು. ಅನ್ಯಜಾತಿಯ ಇವರ ಪ್ರೀತಿಗೆ ಹುಡುಗನ ಮನೆಯಿಂದ ಯಾವುದೇ ವಿರೋಧವಿರಲಿಲ್ಲ. ಯುವತಿ ಮನೆಯಿಂದ ಇದಕ್ಕೆ ತೀವ್ರ ವಿರೋಧವಿತ್ತು. ಯುವಕನ ಮನೆಯಲ್ಲಿ ಮಾಂಸ ತಿನ್ನುತ್ತಾರೆ. ದೇವರು ಒಪ್ಪಿಲ್ಲ, ಎಡಗಡೆ ಅಪ್ಪಣೆಯಾಗಿದೆ ಎಂದು ಹೇಳಿದ್ದರಂತೆ. ಇಷ್ಟಾದರೂ ಯುವತಿ ತನ್ನ ಮನೆಯವರ ಮಾತನ್ನು ತಿರಸ್ಕರಿಸಿ ಯುವಕನನ್ನು ಮದುವೆಯಾಗಿದ್ದಳು.

ಪರಸ್ಪರ ಪ್ರೀತಿಸುದ್ದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರು ಮಾಡುವ ಹೊತ್ತಲ್ಲೇ ಪೊಲೀಸರು ನವಜೋಡಿಯನ್ನು ಠಾಣೆಗೆ ಕರೆ ತಂದಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪಂಚಾಯಿತಿ ನಡೆದಿತ್ತು. ಆಗ ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಳು ಎಂದು ತಿಳಿದುಬಂದಿದೆ. ಮದುವೆಯಾದ ಮೂರೇ ದಿನಕ್ಕೆ ಗಂಡನನ್ನು ಬಿಟ್ಟು ತಾಯಿ ಜೊತೆ ಹೋಗುವುದಾಗಿ ಹೇಳಿ ಯುವತಿ ಉಲ್ಟಾ ಹೊಡೆದಿದ್ದಾಳೆ.

ಈ ಘಟನೆಯಾದ ಬಳಿಕ ಯುವಕ ಒಂದು ತಿಂಗಳಿನಿಂದ ಮೌನಕ್ಕೆ ಜಾರಿದ್ದ. ಬಳಿಕ ಇದೇ ನೋವಿನಲ್ಲಿ ಫೆಬ್ರವರಿ 2 ರಂದು ಆತ್ಮಹತ್ಯೆಗೆ ಯತ್ನಿಸಿ ನೇಣು ಹಾಕಿಕೊಂಡಿದ್ದ ವಿನೋದ್ ನನ್ನು ರಕ್ಷಿಸಿ ಕುಟುಂಬಸ್ಥರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ಮೃತಪಟ್ಟಿದ್ದಾನೆ.

ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.