ನವದೆಹಲಿ: ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯ ಬಜೆಟ್ ಮಂಡನೆಯ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ ಎಂದೂ ಸಿದ್ದರಾಮಯ್ಯ ಹೇಳಿದರು. ಬಜೆಟ್ ಕೂಡ ಒಂದು ಶ್ವೇತಪತ್ರವೇ ಆಗಿದೆ. ಆದರೂ ನಾವು ಶ್ವೇತಪತ್ರ ಹೊರಡಿಸುತ್ತೇವೆ ಎಂದು ಅವರು ಹೇಳಿದರು.
ಯುಪಿಎ ಅವಧಿಯ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ ಎಂಬ ಬಿಜೆಪಿ ಸರ್ಕಾರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೆಯೇ ಸೆಸ್, ಸರ್ಚಾರ್ಜ್ ಬಗ್ಗೆಯೂ ಹೊರಡಿಸಲಿ ಎಂದರು.
ಕರ್ನಾಟಕದಲ್ಲಿ ಬರಗಾಲ ಇದೆ. ಐದು ತಿಂಗಳಾದರೂ ಕೇಂದ್ರ ಸರ್ಕಾರ ಇದುವರೆಗೂ ಹಣ ನೀಡಿಲ್ಲ. ನಮ್ಮ ಸಚಿವರು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಭೇಟಿಯಾದರು. ನಾನೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದೆ. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಆಗ ಅಮಿತ್ ಶಾ, ಡಿಸೆಂಬರ್ 23 ರಂದು ಸಭೆ ಕರೆದು ನಿರ್ಧಾರ ತೆಗೆದುಕೊಳ್ತೀನಿ ಅಂದರು. ಆದರೆ ಏನೂ ಮಾಡಿಲ್ಲ ಎಂದರು.
ಇಷ್ಟು ದೊಡ್ಡಬರಗಾಲ ರಾಜ್ಯದಲ್ಲಿ ಎಂದೂ ಬಂದಿರಲಿಲ್ಲ. ನಾವು 17 ಸಾವಿರದ 900 ಕೋಟಿ ರೂಪಾಯಿ ಪರಿಹಾರ ಕೇಳಿದ್ದೆವು. ಎಂನರೇಗಾದ ಅಡಿಯಲ್ಲಿ ಕೆಲಸದ ದಿನಗಳನ್ನು 150 ದಿನ ಮಾಡಿ ಅಂತಾ ಕೇಳಿದ್ವಿ. ಅದನ್ನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ದೂರಿದರು.
ಆದರೆ ನೀರಾವರಿ ಯೋಜನೆಗೆ, ಭದ್ರಾ ಮೇಲ್ದಂಡೆಗೆ 5300 ಕೋಟಿ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಭದ್ರಾ ಮೇಲ್ದೆಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಈಗ ಕೇಂದ್ರ ಸರ್ಕಾರ ಏನೂ ಕೊಡಲ್ಲ ಅಂದರೆ ಹೇಗೆ? ಬಜೆಟ್ ಭಾಷಣದಲ್ಲಿ ಬೊಮ್ಮಾಯಿ ಮತ್ತೆ ಆ ವಿಚಾರ ಪ್ರಸ್ತಾಪಿಸಿದ್ದು ಹೇಗೆ? ಅವರು ಸಿಎಂ ಆಗಿದ್ದವರಲ್ಲವಾ? ಅವರದ್ದೆ ಸರ್ಕಾರ ಏಕೆ ಕೊಡ್ತಾ ಇಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.










