ಚಿತ್ರದುರ್ಗ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ತಾಲೂಕಿನ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಾ ಘಟಕ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಆಧಾರಿತ ವೈದ್ಯ ಡಾ.ಅಭಿಷೇಕ್ ಅವರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶ ಹೊರಡಿಸಿದ್ದಾರೆ.
ಡಿಫರೆಂಟ್ ಮತ್ತು ಯುನೀಕ್ ಆಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುವ ಭರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಅಭಿಷೇಕ್ ಅವರು ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಳೆದ ಫೆ.07 ರಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದರು. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜೊತೆಗೆ ಡಾ.ಅಭಿಷೇಕ್ ಜೋಡಿ ಬಗ್ಗೆ ಟೀಕೆ ಮಾಡಲಾಗಿತ್ತು. ಕೆಲವರು ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ದುರ್ಬಳಕೆ ಬಗ್ಗೆ ಕಿಡಿಕಾರಿದ್ದರು.
ಇಂತಹ ಕಾರ್ಯವು ನಿಯಮ ಬಾಹಿರವಾಗಿದ್ದು, ವೈದ್ಯರು ಕರ್ತವ್ಯ ಲೋಪವೆಸಗಿರುತ್ತಾರೆ. ಹೀಗಾಗಿ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳ ವರದಿಯನ್ವಯ ಡಾ. ಅಭಿಷೇಕ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ತಿಳಿಸಿದ್ದಾರೆ.










