ಬೆಂಗಳೂರು: ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಾಜಿ ಕಾರ್ಪೊರೇಟರ್ ಪದ್ಮರಾಜು ವಿರುದ್ಧ ನಗರದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿನ್ನೆ ರಾತ್ರಿ ಗೋಪಾಲಯ್ಯ ಮನೆ ಬಳಿ ಬಂದು ಪದ್ಮರಾಜ್ ಗಲಾಟೆ ಮಾಡಿದ್ದು, ಹಳೆ ವೈಷಮ್ಯದಿಂದ ಕೊಲೆ ಬೆದರಿಕೆ ಹಾಕಿದ್ದಾಗಿ ಪೊಲೀಸ್ ಠಾಣೆಗೆ ಕೆ. ಗೋಪಾಲಯ್ಯ ದೂರು ನೀಡಿದ್ದರು.
ಪದ್ಮರಾಜ್ ನಿನ್ನೆ ತಡರಾತ್ರಿ ಗೋಪಾಲಯ್ಯಗೆ ಕರೆ ಮಾಡಿ ಹಣ ಬೇಕೆಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಣ ಕೊಡದಿದ್ರೆ ಏನು ಮಾಡ್ತೀನಿ ಗೊತ್ತಾ ಎಂದು ಬೆದರಿಕೆಯೊಡ್ಡಿದ್ದು, ಇದರಿಂದ ನೊಂದ ಗೋಪಾಲಯ್ಯ ಇಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಜೊತೆಗೆ ಸ್ಪೀಕರ್ ಮತ್ತು ಸಿಎಂಗೂ ದೂರು ಕೊಡಲು ಗೋಪಾಲಯ್ಯ ಮುಂದಾಗಿದ್ದಾರೆ.
ಪದ್ಮರಾಜ್ಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದೇನೆ. ಆದರೆ ಈ ಥರ ಕುಡಿದು ನಿಂದಿಸಿದ್ದು, ಬೆದರಿಕೆ ಹಾಕಿದ್ದು ನೋವಾಗಿದೆ ಎಂದು ಗೋಪಾಲಯ್ಯ ಅಳಲು ತೋಡಿಕೊಂಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಪದ್ಮರಾಜ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ವಿಚಾರಣೆಗೆ ನೋಟಿಸ್ ನೀಡಲು ಪೊಲೀಸರು ಪದ್ಮರಾಜ್ ಮನೆಗೆ ತೆರಳಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯದೆ ಪದ್ಮರಾಜ್ ಗಲಾಟೆ ಮಾಡುತ್ತಿದ್ದು, ಪೊಲೀಸರು ಪದ್ಮರಾಜ್ ಬಂಧನಕ್ಕೆ ಹರಸಾಹಸ ಪಟ್ಟರು.
ಕೊನೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪದ್ಮರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪದ್ಮರಾಜ್ ಬಳಿಯಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.










