ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ನಾನು ಇನ್ನೂ ತೀರ್ಮಾನ ಮಾಡಿಲ್ಲ: ಡಾ.ಸಿ.ಎನ್ ಮಂಜುನಾಥ್.

44
firstsuddi

ಮಂಡ್ಯ: ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೆ ಬರಬೇಕಾ?, ಲೋಕಸಭಾಗೆ ನಿಲ್ಲಬೇಕೆಂದು ನಿರ್ಧಾರ ಮಾಡಿಲ್ಲ. ಹಲವು ಕಡೆ ಜನರು ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಾ. ಇದೇ ರೀತಿ ರಾಷ್ಟ್ರಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳುತ್ತಿದ್ದಾರೆ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದರೆ ಹೇಳುತ್ತೀನಿ ಎಂದು ಸ್ಪಷ್ಟನೆ ನೀಡಿದರು.

ನಾನು ಈಗಲೂ ಆಲೋಚನೆಯಲ್ಲಿಯೇ ಇದ್ದೀನಿ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ. ನನ್ನ ಅರ್ಥದಲ್ಲಿ ಲೋಕಸಭೆನೇ ಬೇರೆ, ರಾಜಕೀಯವೇ ಬೇರೆ. ಸದ್ಯ ಆಲೋಚನೆಯಲ್ಲಿ ಇದ್ದೀನಿ. ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ಹೇಳುತ್ತೇನೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಮಾಡಿರೋದು ಜನ ಸೇವೆ. ರಾಷ್ಟ್ರಮಟ್ಟದಲ್ಲಿ ಜನಸೇವೆಗೆ ಅವಕಾಶವಿದೆ ಹೋಗಿ ಎನ್ನುತ್ತಿದ್ದಾರೆ. ಒಂದು ಜಿಲ್ಲೆಗೆ ಹೋದಾಗ ಆ ಜಿಲ್ಲೆಯವರು ಹೇಳುತ್ತಾರೆ. ನಾಳೆ ಮೈಸೂರಿಗೆ ಹೋಗುತ್ತಿದ್ದೇನೆ. ಹೋದಲ್ಲಿ ಎಲ್ಲಾ ಅಲ್ಲಿ ನಿಲ್ಲುತ್ತೀರಾ ಎಂದು ಜನರು ಕೇಳುತ್ತಿದ್ದಾರೆ. ಈ ರಾಜಕೀಯ ಕ್ಷೇತ್ರಕ್ಕೆ ಹೋಗಬೇಕಾ ಬೇಡವಾ ಎಂಬ ನಿರ್ಧಾರವೇ ಮಾಡಿಲ್ಲ ಎಂದು ತಿಳಿಸಿದರು.