ಬೆಂಗಳೂರು: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನಕಲಿ ಖಾತೆಯನ್ನು ತೆರೆದು 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ವ್ಯಕ್ತಿಯನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ರಾಜಸ್ಥಾನ ಮೂಲದ ನರೇಶ್ ಪೂಜಾರಿ ಗೋಸ್ವಾಮಿ (45) ಎಂದು ಪೊಲೀಸರು ಗುರುತಿಸಿದ್ದಾರೆ. ಈತ ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಮ್ಯಾಟ್ರಿಮೋನಿಯಲ್ ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ ಮಹಿಳೆಯರು ಮತ್ತು ಅವರ ಪೋಷಕರಿಗೆ ಹಣ ನೀಡುವಂತೆ ಆಮಿಷವೊಡ್ಡಿದ್ದರು.
ಕೊಯಮತ್ತೂರಿನ ಸಂತ್ರಸ್ತೆಯೊಬ್ಬರ ದೂರು ದಾಖಲಿಸಿಕೊಂಡ ನಂತರ ರೈಲ್ವೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಗೋಸ್ವಾಮಿ ವಿಧವೆಯರನ್ನು ಮತ್ತು ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು, ತಡರಾತ್ರಿ ಮಹಿಳೆಯರೊಂದಿಗೆ ಸಂದೇಶ ಕಳುಹಿಸಿ, ಮಾತನಾಡಿ, ವಿಶ್ವಾಸ ಗಳಿಸಿ ಹಣ ನೀಡುವಂತೆ ಆಮಿಷ ಒಡ್ಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
45 ವರ್ಷ ವಯಸ್ಸಿನ ಆರೋಪಿ ಸುಂದರ ಯುವಕರ ಫೋಟೋಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಪ್ರೊಫೈಲ್ ರಚಿಸಿ ಕಸ್ಟಮ್ ಅಧಿಕಾರಿ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಪೋಸ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಸುಮಾರು 259 ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ರಾಜಸ್ಥಾನದ 56, ಉತ್ತರ ಪ್ರದೇಶದ 32, ದೆಹಲಿಯ 32, ಕರ್ನಾಟಕದ 17, ಮಧ್ಯಪ್ರದೇಶದ 16, ಮಹಾರಾಷ್ರ ದ 13, ಗುಜರಾತ್ 11 ಮಹಿಳೆಯರಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇದೇ ರೀತಿ ಹಲವು ಮಹಿಳೆಯರಿಗೆ ವಂಚನೆ ಮಾಡಿದ ಪ್ರಕರಣಗಳು ಬಯಲಿಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.










